ಹೊಸದಿಲ್ಲಿ : ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾ ಪಟ್ಟಿ ಅಧಿಕೃತವಾಗಿ ಪ್ರಕಟಗೊಳ್ಳುವ ಮುನ್ನವೇ ಅದು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿ ಹೋದ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗ ಇಂದು ಮಂಗಳವಾರ ತನ್ನ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದೆ.

ವಾರದೊಳಗೆ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿರುವುದು ವರದಿಗಳು ತಿಳಿಸಿವೆ.

ಭವಿಷ್ಯದಲ್ಲಿ ಈ ರೀತಿಯ ಸೋರಿಕೆ ಘಟಿಸುವುದನ್ನು ತಪ್ಪಿಸಲು ಮಾರ್ಗೋಪಾಯಗಳನ್ನು ಹಾಗೂ ಎಚ್ಚರಿಕೆಯ ಕ್ರಮಗಳನ್ನು ಸೂಚಿಸುವಂತೆಯೂ ಸಮಿತಿಯನ್ನು ಕೇಳಿಕೊಳ್ಳಲಾಗಿದೆ.

ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ಅವರಿಂದು ಬೆಳಗ್ಗೆ ಸುದ್ದಿ ಗೋಷ್ಠಿ ನಡೆಸಿ ಕರ್ನಾಟಕ ವಿಧಾನಸಭೆಯ 2018ರ ಚುನಾವಣಾ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವುದಕ್ಕೆ ಮುನ್ನವೇ ಅದು ಸಾಮಾಜಿಕ ಮಾಧ್ಯಮಗಳಲ್ಲಿ ಲೀಕ್‌ ಆದುದು ಹೇಗೆ ಮತ್ತು ಯಾರಿಂದ ಎಂಬುದು ಅನಂತರದಲ್ಲಿ ಬಯಲಾಗಿತ್ತು.

RELATED ARTICLES  ದಿವ್ಯಜೀವನ ಪುಸ್ತಕ ಲೋಕಾರ್ಪಣೆ : ವಿದ್ವಾನ್ ಜಗದೀಶಶರ್ಮಾ ಸoಪ ಅವರ ಕೃತಿ

ಮೇ 12ರಂದು ಮತದಾನ ನಡೆಯಲಿದೆ ಎಂಬುದನ್ನು ಟ್ವಿಟರ್‌ ಮೂಲಕ ಮೊದಲಾಗಿ ಬಹಿರಂಗಪಡಿಸಿದವರು ಭಾರತೀಯ ಜನತಾ ಪಕ್ಷದ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಎನ್ನುವುದು ಗೊತ್ತಾಗಿತ್ತು.
ಅದಾಗಿ ಬೆಳಗ್ಗೆ 11.08ರ ಹೊತ್ತಿಗೆ ಕರ್ನಾಟಕ ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮಗಳ ಮೀಡಿಯ ಹೆಡ್‌ ಇನ್‌ ಚಾರ್ಜ್‌ ಶ್ರೀವಾಸ್ತವ ಅವರು ಟ್ವೀಟ್‌ ಮಾಡಿ ಇದೇ ವಿಷಯವನ್ನು ಬಹಿರಂಗಪಡಿಸಿದ್ದರು.

ಆದರೆ ಇವರಿಬ್ಬರೂ ಮತದಾನದ ದಿನಾಂಕವನ್ನು (ಮೇ 12) ಸರಿಯಾಗಿಯೇ ಹೇಳಿದ್ದರು; ಆದರೆ ಮತ ಎಣಿಕೆ ದಿನಾಂಕವನ್ನು (ಮೇ 15) ತಪ್ಪಾಗಿ ಮೇ 18 ಎಂದು ಟ್ವೀಟ್‌ ಮಾಡಿದ್ದರು.

RELATED ARTICLES  ಬಿಜೆಪಿ ಸಂಸದ ವರುಣ್ ಗಾಂಧಿ ಕಾಂಗ್ರೆಸ್ ಸೇರುತ್ತಾರಾ? ಸಾಧ್ಯತೆಗಳು ನಿಚ್ಚಳ

ಬಿಜೆಪಿ ಸಚಿವ ಮುಖ್‌ತಾರ್‌ ಅಬ್ಟಾಸ್‌ ನಕ್ವಿ ಅವರು “ಅಮಿತ್‌ ಮಾಳವೀಯ ಟ್ವೀಟ್‌ ಮಾಡಿರುವುದು ಟಿವಿ ಚ್ಯಾನಲ್‌ ಮೂಲಗಳ ಆಧಾರದಲ್ಲಿ; ಮುಖ್ಯ ಚುನಾವಣಾ ಆಯುಕ್ತರ ಮಹತ್ವವನ್ನು ತಗ್ಗಿಸುವ ಯಾವುದೇ ಇರಾದೆ ಅವರಿಗೆ ಇರಲಿಲ್ಲ’ ಎಂದು ತಮ್ಮ ಸಹೋದ್ಯೋಗಿಯನ್ನು ಸಮರ್ಥಿಸಿಕೊಂಡಿದ್ದರು.

ಶ್ರೀವಾಸ್ತವ ಕೂಡ ಬಹುತೇಕ ಇದೇ ಬಗೆಯ ಉತ್ತರವನ್ನು ಕೊಟ್ಟು ನುಣುಚಿಕೊಂಡಿದ್ದಾರೆ. ತಮ್ಮ ಟ್ವೀಟ್‌ಗೆ ಟಿವಿ ಚ್ಯಾನಲ್‌ಗ‌ಳ ಮೂಲವನ್ನು ದೂರಿದ್ದಾರೆ. ಆದರೆ ಶ್ರೀವಾಸ್ತವ ಅವರು ಟ್ವೀಟ್‌ ಮಾಡಬಾರದಿತ್ತು ಎಂದು ಕರ್ನಾಟಕ ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದರು.

ಚುನಾವಣಾ ದಿನಾಂಕ ಅಧಿಕೃತ ಪ್ರಕಟನೆ ಸುದ್ದಿಗೋಷ್ಠಿಗೆ ಮುನ್ನವೇ ಸೋರಿ ಹೋಗಿರುವ ಬಗ್ಗೆ ಮಾಧ್ಯಮದವರು ಗುಲ್ಲೆಬ್ಬಿಸಿ ಸಿಇಸಿ ಅವರಿಗೆ ಆಕ್ಷೇಪ ವ್ಯಕ್ತಪಡಿಸಿದಾಗ ಸಿಇಸಿ ನಿರುತ್ತರರಾಗಿದ್ದರು.