ಅಹಮದಾಬಾದ್‌ : ಈಜಿಪ್ತ್ ನ ರಾಣಿ ಕ್ಲಿಯೋಪಾತ್ರ ಅಪ್ರತಿಮ ಚೆಲುವೆ ಎನ್ನುವುದು ಇತಿಹಾಸ ಹೇಳುತ್ತದೆ. ಅವಳ ಮುಖದ ಕಾಂತಿಯಂತೆ ನಿಮ್ಮ ಮುಖವೂ ಕಾಂತಿಯುತವಾಗಿರಬೇಕಾದರೆ ಮಹಿಳೆಯರಿಗೆ ಟಿಪ್ಸ್‌ ಇಲ್ಲಿದೆ.

ಗುಜರಾತ್‌ ಗೋ ಸೇವಾ ಮತ್ತು ಗೋಚಾರ್‌ ಬೋರ್ಡ್‌ ನೀಡಿರುವ ಸಲಹೆಯಂತೆ ಗೋವಿನ ಉತ್ಪನ್ನಗಳಾದ ಹಾಲು, ಗೋಮೂತ್ರ, ತುಪ್ಪ ಮತ್ತು ಸೆಗಣಿ ಯಿಂದ ಮುಖಕ್ಕೆ ಫೇಸಿಯಲ್‌ ಮಾಡಿಕೊಂಡರೆ ಅತ್ಯುತ್ತಮ ಚರ್ಮ ಕಾಂತಿ ನಿಮ್ಮದಾಗಿಸಿಕೊಳ್ಳಬಹುದು.

ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು ಎನ್ನಲಾದ ವಿಶ್ವದ ಅತೀ ಚೆಲುವೆ ಎನ್ನುವ ಬಿರುದಾಂಕಿತೆ ಕ್ಲಿಯೋಪಾತ್ರಳನ್ನು ಉದಾಹರಣೆ ನೀಡಿ ಗೋವಿನ ಉತ್ಪನ್ನಗಳನ್ನು ಬಳಕೆ ಮಾಡಲು ಮಂಡಳಿ ಸಲಹೆ ನೀಡಿದೆ.

ಆರೋಗ್ಯ ಗೀತಾ ಎಂಬ ಆರೋಗ್ಯ ಸಲಹೆಗಳನ್ನು ನೀಡುವ ವೆಬ್‌ಸೈಟಿನಲ್ಲಿ ಮಹಿಳೆಯರಿಗೆ ಸಲಹೆ ನೀಡಲಾಗಿದ್ದು, ಹಲವು ಚರ್ಮರೋಗಗಳನ್ನು ತಡೆಯಲು ಗೋವಿನ ಉತ್ಪನ್ನಗಳು ಸಹಕಾರಿಯಾಗಬಲ್ಲುದು.ಇದನ್ನು ರಷ್ಯಾ ,ಚೀನಾ ಮತ್ತು ಅಮೆರಿಕದ ವಿಜ್ಞಾನಿಗಳು ಧೃಡಪಡಿಸಿದ್ದಾರೆ ಎಂದು ಬರೆಯಲಾಗಿದೆ.

ನೀವೇನು ಮಾಡಬೇಕು?

ಮೊದಲು ಮುಖಕ್ಕೆ ದನದ ಹಾಲಿನಲ್ಲಿ ಮಸಾಜ್‌ ಮಾಡಿಕೊಂಡು 15 ನಿಮಿಷ ದ ಬಳಿಕ ತುಪ್ಪ ಮತ್ತು ಅರಸಿನ ವನ್ನು ಮಿಶ್ರಣ ಮಾಡಿ ಫೇಸಿಯಲ್‌ ಮಾಡಿಕೊಳ್ಳಬೇಕು .15 ನಿಮಿಷದ ಬಳಿಕ ಗೋಮೂತ್ರವನ್ನು ಮಸಾಜ್‌ ಮಾಡಿಕೊಳ್ಳಬೇಕು. 15 ನಿಮಿಷ ಬಿಟ್ಟು ಕೊನೆಯದಾಗಿ ಗೋಮಯವನ್ನು (ಸೆಗಣಿ) ಮುಖಕ್ಕೆ ಫೇಸಿಯಲ್‌ ಮಾಡಿಕೊಳ್ಳಬೇಕು 15 ನಿಮಷದ ಬಳಿಕ ಬೇವಿನ ನೀರಿನಲ್ಲಿ ಮುಖ ತೊಳೆದರೆ ಕ್ಲಿಯೋಪಾತ್ರಳ ಬ್ಯೂಟಿ ನಿಮ್ಮದಾಗುತ್ತದೆ ಎಂದು ಸಲಹೆ ನೀಡಲಾಗಿದೆ.

ಅಂದಹಾಗೆ ಕ್ಲಿಯೋ ಪಾತ್ರ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು ಎಂದು ಇತಿಹಾಸ ಹೇಳುತ್ತದೆ.