ಲಂಡನ್: ತಂಬಾಕು ಸೇವನೆಯಿಂದ ದೂರವಿರುವುದು, ವ್ಯಾಯಾಮ ಮಾಡುವುದು ಮತ್ತು ತೂಕ ಕಳೆದುಕೊಳ್ಳುವ ಮೂಲಕ ಪ್ರತಿವಾರ ಸಾವಿರಾರು ಕ್ಯಾನ್ಸರ್ ರೋಗ ಪ್ರಕರಣವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆಯೊಂದು ಹೇಳುತ್ತದೆ.
ಅಲ್ಲದೆ ಮದ್ಯಪಾನ ಸೇವನೆಯಿಂದ ದೂರವುಳಿಯುವ ಮೂಲಕ, ಅಲ್ಟ್ರಾ-ವೈಲೆಟ್ (UV) ವಿಕಿರಣಕ್ಕೆ ಶರೀರ ಮುಕ್ತವಾಗಿ ತೆರೆದುಕೊಳ್ಳುವುದನ್ನು ಕಡಿಮೆ ಮಾಡುವ ಮೂಲಕ, ವಾಯು ಮಾಲಿನ್ಯ ನಿಯಂತ್ರಣ ಮತ್ತು ನಾರಿನ ಅಂಶಗಳಿರುವ ವಸ್ತುಗಳನ್ನು ಹೆಚ್ಚು ಸೇವಿಸುವುದರಿಂದ ಕೂಡ ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದು.
ಈ ಮುಂಜಾಗ್ರತೆಗಳನ್ನು ಪಾಲಿಸುವ ಮೂಲಕ ಇಂಗ್ಲೆಂಡ್ ನಲ್ಲಿ ಪ್ರತಿ ಹತ್ತರಲ್ಲಿ ನಾಲ್ಕು ಕ್ಯಾನ್ಸರ್ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಇಂಗ್ಲೆಂಡಿನ ಸರ್ಕಾರೇತರ ಸಂಘಟನೆಯೊಂದು ನಡೆಸಿರುವ ಸಂಶೋಧನೆಯಿಂದ ತಿಳಿದುಬಂದಿದೆ. ಇದು ಇಂಗ್ಲೆಂಡಿನ ಕ್ಯಾನ್ಸರ್ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
ಉತ್ತಮ ಜೀವನಶೈಲಿ ಪಾಲಿಸುವ ವ್ಯಕ್ತಿಗೆ ಕ್ಯಾನ್ಸರ್ ಬರುವುದಿಲ್ಲ ಎಂದು ಅರ್ಥವಲ್ಲ, ಆದರೆ ಈ ಎಲ್ಲಾ ಆರೋಗ್ಯಕರ ಜೀವನಶೈಲಿಗಳು ಮನುಷ್ಯನನ್ನು ಇನ್ನಷ್ಟು ಕಾಲ ಬದುಕಿಸಲು ನೆರವಾಗಬಹುದು ಎನ್ನುತ್ತಾರೆ ಇಂಗ್ಲೆಂಡಿನ ಕ್ಯಾನ್ಸರ್ ಸಂಶೋಧನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಪಲ್ ಕುಮಾರ್.
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ಜನರು ಸಾಯಲು ಕಾರಣವಾಗುವ ಎರಡನೇ ಅತಿದೊಡ್ಡ ರೋಗ ಕ್ಯಾನ್ಸರ್. 2015ರಲ್ಲಿ ವಿಶ್ವದಲ್ಲಿ 88 ಲಕ್ಷ ಮಂದಿ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಇಂದು ಪ್ರತಿ ಆರು ಮಂದಿಯಲ್ಲಿ ಒಬ್ಬರು ಕ್ಯಾನ್ಸರ್ ನಿಂದ ಸಾಯುತ್ತಿದ್ದಾರೆ.
2015ರ ಕ್ಯಾನ್ಸರ್ ಅಂಕಿಅಂಶ ಪ್ರಕಾರ, ಇಂಗ್ಲೆಂಡ್ ನಲ್ಲಿ ಪುರುಷರಲ್ಲಿ 32,200 ಮಂದಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ಗೆ ಬಲಿಯಾದರೆ, ಮಹಿಳೆಯರಲ್ಲಿ 22,000 ಮಂದಿ ಕ್ಯಾನ್ಸರ್ ಗೆ ಜೀವ ಕಳೆದುಕೊಂಡಿದ್ದಾರೆ. ಸುಮಾರು 22,800 ಮಂದಿ ಕರುಳಿನ, ಸ್ತನ, ಗರ್ಭಾಶಯ, ಮೂತ್ರಪಿಂಡದ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ.