ತುಮಕೂರು, – ವ್ಯಕ್ತಿಯ ಮರ್ಮಾಂಗವನ್ನು ಕತ್ತರಿಸಿ ತಲೆ ಹಾಗೂ ಕುತ್ತಿಗೆಗೆ ಮೊಳೆ ಹೊಡೆದು ವಿಕೃತವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ತುಮಕೂರು-ಹೆಬ್ಬೂರು ರಸ್ತೆ ಬೈಪಾಸ್ ಬಳಿ ಪತ್ತೆಯಾಗಿದ್ದ ಶವವನ್ನು ಆಸ್ಪತ್ರೆಗೆ ಸಾಗಿಸಿ ನಂತರ ಆತನ ಚಹರೆಯನ್ನು ಛಾಯಾಚಿತ್ರ ತೆಗೆಸಿ ತನಿಖೆ ಕೈಗೊಂಡಾಗ ಕೊಲೆಯಾದ ವ್ಯಕ್ತಿಯನ್ನು ಮೂಲತಃ ಹೆಬ್ಬೂರಿನ ಹೊಸ ಹೆಡಕನಹಳ್ಳಿಯ ಕೆಂಪಣ್ಣ (55) ಎಂದು ಗುರುತಿಸಲಾಗಿದೆ.
ಅಚ್ಚರಿ ಎಂಬಂತೆ ಕೊಲೆಯಾದ ಕೆಂಪಣ್ಣ ಕಳೆದ 20 ವರ್ಷದ ಹಿಂದೆ ಪತ್ನಿ ಮಕ್ಕಳನ್ನು ಬಿಟ್ಟು ಹೋಗಿದ್ದ. ಅಂದಿನಿಂದ ಆತ ಕಾಣಿಸಿರಲಿಲ್ಲ. ಈಗ ಶವವಾಗಿ ಗ್ರಾಮಕ್ಕೆ ಮರಳಿದ್ದಾನೆ ಎಂದು ಆತನ ಸಂಬಂಧಿಕರು ಮರುಗಿದ್ದಾರೆ. ಪೊಲೀಸರಿಗೂ ಸವಾಲಾಗಿದ್ದ ಈ ಗುರುತು ಪತ್ತೆ ತನಿಖೆ ಈಗ ಯಶಸ್ವಿಯಾಗಿದೆ. ಆದರೆ ಕೊಲೆಗಾರರು ಯಾರು ಎಂಬುದನ್ನು ಪತ್ತೆ ಹಚ್ಚಬೇಕಿದೆ. ಇಷ್ಟು ದಿನ ಈತ ಎಲ್ಲಿದ್ದ ಮತ್ತು ಏನು ಮಾಡುತ್ತಿದ್ದ ಎಂಬುದು ಯಾರಿಗೂ ತಿಳಿದಿಲ್ಲ. ಮೃತಪಟ್ಟಿರುವ ನನ್ನ ಪತಿಯದ್ದೇ ಎಂದು ಲಕ್ಷ್ಮಮ್ಮ ಎಂಬುವರು ಖಚಿತಪಡಿಸಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ವಿಚಿತ್ರವಾಗಿರುವ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ರಚಿಸಲಾಗಿದ್ದು, ಹೆಚ್ಚುವರಿ ಎಸ್‍ಪಿ ಶೋಭಾರಾಣಿ, ಡಿವೈಎಸ್ಪಿ ನಾಗರಾಜ್ ಮತ್ತಿತವರ ತಂಡ ತನಿಖೆಯನ್ನು ಚುರುಕುಗೊಳಿಸಿದೆ .