ಕುಮಟಾ : ಕೆನರಾ ಎಜ್ಯುಕೇಶನ್ ಸೊಸೈಟಿಯ ಅಧ್ಷಕ್ಷ ಎಂ.ವಿ. ಶಾನಭಾಗ ಬುರ್ಡೇಕರ (95) ನಿನ್ನೆ ದಿ.19 ರಂದು ರಾತ್ರಿ 9.45 ಕ್ಕೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಐವರು ಗಂಡು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ. 1987 ರಿಂದ ಕೆನರಾ ಎಜ್ಯುಕೇಶನ್ ಸೊಸೈಟಿಯ ಕಾರ್ಯಾಧ್ಯಕ್ಷರಾಗಿ, 1992 ರಿಂದ ಅಧ್ಯಕ್ಷರಾಗಿ ಪ್ರತಿಷ್ಠಿತ ವಿದ್ಯಾಸಂಸ್ಥೆಗಳನ್ನು ನಡೆಸಿಕೊಂಡು ಬಂದಿದ್ದರು. ಕೆನರಾ ಕಾಲೇಜು ಸೊಸೈಟಿ, ವರ್ತಕರ ಸಂಘ, ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಆಡಳಿತ ಮಂಡಳಿ, ಶ್ರೀ ಮಠದ, ಶ್ರೀ ಪರ್ತಗಾಳಿ ಮಠದ ಅಧ್ಯಕ್ಷರಾಗಿಯೂ ತಮ್ಮ ಸುದೀರ್ಘ ಜೀವನದಲ್ಲಿ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಸೇವೆ ಸಲ್ಲಿಸಿದ್ದರು.

ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಬಿಲ್ಡಿಂಗ್ ಕಮಿಟಿಯ ಚೇರ್ಮನ್ನರಾಗಿಯೂ,  ಶಾಲೆಗೆ ಒಂದು ಕೊಠಡಿಯನ್ನು ದೇಣಿಗೆ ನೀಡಿದ್ದರು
ಗೌಡ ಸಾರಸ್ವತ ಸಮಾಜದ ಪಿತಾಮಹನಂತೆ ಬೆಳಗಿದ  ಅವರ ಸಾವಿನ ಸುದ್ದಿ ತಿಳಿದು, ಕೆನರಾ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷ ಆರ್.ಆರ್.ಶಾನಭಾಗ,  ಕಾರ್ಯಾಧ್ಯಕ್ಷ ವಸುದೇವ ಪ್ರಭು, ಗೌರವ ಕಾರ್ಯದರ್ಶಿ ಕಮಲಾ ರಾವ್ ಕಂಬನಿ ಮಿಡಿದಿದ್ದಾರೆ. ಸೊಸೈಟಿಯ ಉಪಕಾರ್ಯಾಧ್ಯಕ್ಷ ಶಿರೀಷ್ ಪಿ.  ನಾಯಕ, ಸದಸ್ಯರಾದ ವಿ.ಎ.ನಿಲ್ಕುಂದ, ಕೃಷ್ಣಾನಂದ ಪೈ,  ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್. ಅರ್.ಗಜು, ಸಹಶಿಕ್ಷಕರು,  ಗಿಬ್ ಸಂಸ್ಥೆಯ  ಸಿಬ್ಬಂದಿಗಳು ಅಂತಿಮ ದರ್ಶನ ಪಡೆದರು. ಅವರ ಗೌರವಾರ್ಥ ಕೆ.ಇ.ಸೊಸೈಟಿಯ ಎಲ್ಲ ಶಾಲೆಗಳು ಸಂತಾಪ ಸೂಚಕವಾಗಿ ಮೌನ ಪ್ರಾರ್ಥನೆ ಮಾಡಿ  ಒಂದು ದಿನದ ರಜೆ ಘೋಷಿಸಿ ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.