ಬೆಂಗಳೂರು, – ಸುಮಾರು 15ಲಕ್ಷಕ್ಕೂ ಹೆಚ್ಚಿನ ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಒಂದು ವೇಳೆ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬೇಕಿದ್ದರೆ. ಏ.14ರವರೆಗೂ ಕಾಲಾವಕಾಶವಿದೆ.
ತಕ್ಷಣವೇ ಅರ್ಜಿ ಸಲ್ಲಿಸಿ ಎಂದು ಸೂಚನೆ ನೀಡಿದೆ. ಇತ್ತೀಚೆಗೆ ಪಿಆರ್‍ಡಿಡಿಪಿ ಎಂಬ ಸ್ವಯಂ ಸೇವಾ ಸಂಸ್ಥೆಯೊಂದು ತಾನು ಸಮೀಕ್ಷೆ ಮಾಡಿರುವುದಾಗಿ ಹೇಳಿಕೊಂಡಿದ್ದು, ಸಮೀಕ್ಷೆಯಲ್ಲಿ ಸುಮಾರು 15ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಆರೋಪ ಮಾಡಿತ್ತು. ಕಚೇರಿ ಈ ಆರೋಪವನ್ನು ತಳ್ಳಿಹಾಕಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಾಕಷ್ಟು ಕಾರ್ಯಾಚರಣೆಯನ್ನು ನಡೆಸಲಾಗಿದೆ. ಚುನಾವಣಾ ಆಯೋಗದ ಸಿಬ್ಬಂದಿಗಳು ಎರಡೆರಡು ಬಾರಿ ಮನೆ ಮನೆಗೆ ಭೇಟಿ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಯಾರ ಹೆಸರನ್ನೂ ಕೈ ಬಿಟ್ಟಿಲ್ಲ. ಆಕ್ಷೇಪ ಕೇಳಿಬರದ ಹೊರತು ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿಲ್ಲ. ಸಾಕಷ್ಟು ಎಚ್ಚರಿಕೆಯಿಂದಲೇ ಕೆಲಸ ಮಾಡಿದ್ದೇವೆ. ಖಾಸಗಿ ಸಮೀಕ್ಷೆ ನಡೆಸುವಾಗ ಯಾವ ರೀತಿಯ ದೂರುಗಳು ಕೇಳಿ ಬಂದಿದ್ದವೋ ಗೊತ್ತಿಲ್ಲ. ಒಂದು ವೇಳೆ ಇತ್ತೀಚೆಗೆ ಬಂದು ನೆಲೆಸಿರುವವರು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸದೇ ಇರುವವರ ಹೆಸರುಗಳು ಸೇರ್ಪಡೆಯಾಗದೇ ಇರಬಹುದು. ಅದಕ್ಕೆ ಆಯೋಗ ಹೊಣೆಯಲ್ಲ ಎಂದಿದೆ.
ಮೊದಲು ಮತದಾರರು ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅರ್ಜಿಸಲ್ಲಿಸಬೇಕು. ಈಗಲೂ ಕಾಲವಕಾಶವಿದೆ. ಏ.14ರವರೆಗೆ ಅರ್ಜಿ ನಮೂನೆ 6ರಲ್ಲಿ ಎಷ್ಟೇ ಮಂದಿ ಅರ್ಜಿ ಸಲ್ಲಿಸಿದರೂ ಸೇರ್ಪಡೆ ಮಾಡಿಕೊಳ್ಳಲು ಆಯೋಗ ಸಿದ್ದವಿದೆ. ಕೂಡಲೇ ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಉನ್ನತಾಧಿಕಾರಿಗಳು ಮನವಿ ಮಾಡಿದ್ದಾರೆ.ಚುನಾವಣೆ ದಿನ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದು ಪರದಾಡುವ ಬದಲು ಪೂರ್ವಭಾವಿಯಾಗಿಯೇ ತಮ್ಮ ಹೆಸರು ಇದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಿ ಖಚಿತ ಪಡಿಸಿಕೊಳ್ಳಿ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.