ಕಲಬುರ್ಗಿ: ಯಾದಗಿರಿ ಜಿಲ್ಲೆ ಸುರಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್‌ನ ವಿಭಾಗದ ನಾಲ್ವರು ವಿದ್ಯಾರ್ಥಿಗಳು ಹಾಗೂ ಮೂವರು ಉಪನ್ಯಾಸಕರು ‘ಪರಿಚಾರಕಿ ರೊಬೊಟ್’ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ನಿರ್ದಿಷ್ಟ ಬಿಂದುವಿನಿಂದ ಹೊರಟು ಅದೇ ಬಿಂದುವಿಗೆ ಮರಳಿ ಬರುವ ಹಾಗೆ ಸರ್ಕೀಟ್(ಮಂಡಲ)ವನ್ನು ಇದಕ್ಕೆ ಅಳವಡಿಸಲಾಗಿದೆ. ಸರ್ಕೀಟ್‌ನ ಒಳಗೆ ಚಲಿಸಬೇಕಾದ ಪಥ ಹಾಗೂ ನುಡಿಯುವ ಪದಗಳನ್ನು ಸೇರಿಸಲಾಗಿದೆ. ಈ ಮಾರ್ಗ ಮತ್ತು ಪದಗಳನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು. ಆ್ಯಪ್ ಬಳಸಿ ರೊಬೊಟ್ ಸೇವೆಯನ್ನು ಪಡೆಯಬಹುದು.
‘ನಮಸ್ಕಾರ’, ಚಹಾ ತೊಗೊಳ್ಳಿ’, ’ಚಹಾ ತೆಗೆದುಕೊಂಡಿದ್ದಕ್ಕೆ ಧನ್ಯವಾದ ಗಳು’ ಈ ಮೂರು ವಾಕ್ಯಗಳನ್ನು ಸರ್ಕೀಟ್‌ಗೆ ಸೇರಿಸಲಾಗಿವೆ. ರೊಬೊಟ್ ನಾಲ್ಕು ದಿಕ್ಕಿನಲ್ಲಿಯೂ ಚಲಿಸಬಲ್ಲದು. ಸೇವೆ ಪಡೆಯುವ ವ್ಯಕ್ತಿ ಯಾವ ದಿಕ್ಕಿನಲ್ಲಿ ಕುಳಿತಿದ್ದರೂ ಆ ದಿಕ್ಕಿನತ್ತ ಸಾಗುತ್ತದೆ.
‘ಇದು ಪ್ರಾಥಮಿಕ ತಂತ್ರಜ್ಞಾನ ಒಳಗೊಂಡಿರುವ ರೊಬೊಟ್. ನಾವು ಹೇಳಿಕೊಟ್ಟಿರುವ ವಿಷಯಗಳಿಗೆ ಅನುಗುಣವಾಗಿ ವರ್ತಿಸುತ್ತದೆ. ಆ ಮಿತಿಯನ್ನು ಮೀರುವುದಿಲ್ಲ’ ಎನ್ನುತ್ತಾರೆ ನಿಷ್ಠಿ ಕಾಲೇಜಿನ ಪ್ರಾಂಶುಪಾಲರಾದ ಲಿಂಗರಾಜ ಶಾಸ್ತ್ರಿ.
‘ಆಸ್ಟೇಲಿಯಾ, ಜಪಾನ್ ದೇಶಗಳಲ್ಲಿ ಇಂಥ ರೊಬೊಟ್‌ಗಳು ಮಾರುಕಟ್ಟೆಗೆ ಬಂದಿದೆ. ಅವುಗಳ ಬೆಲೆ ₹2.5 ಲಕ್ಷದಿಂದ ಆರಂಭವಾಗುತ್ತದೆ. ಆದರೆ, ನಮ್ಮ ಪ್ರಾಧ್ಯಾಪಕರು ₹22 ಸಾವಿರದಲ್ಲಿ ರೂಪಿಸಿದ್ದಾರೆ. ತಾಂತ್ರಿಕವಾಗಿ ಇನ್ನಷ್ಟು ಅಭಿವೃದ್ಧಿ ಪಡಿಸುವ ಯೋಚನೆಯೂ ಇದೆ’ ಎನ್ನುತ್ತಾರೆ ಅವರು.
ಕಾಲೇಜಿನ ವಿದ್ಯಾರ್ಥಿಗಳೇ ಸರ್ಕೀಟ್ ತಯಾರಿಸಿದ್ದರಿಂದ ವೆಚ್ಚ ತಗ್ಗಿದೆ. ಮೆಕ್ಯಾನಿಕಲ್ ವಿಭಾಗದ ಪ್ರೊ.ಶರಣು ಟಿ. ಅವರು ಬಿಡಿಭಾಗಗಳ ಜೋಡಣೆ ಮಾಡಿಕೊಟ್ಟಿದ್ದಾರೆ. ₹7 ಸಾವಿರ ಕ್ಕೆ ಗೊಂಬೆ ಖರೀದಿಸಲಾಗಿದೆ. ಎರಡು ತಿಂಗಳು ಅವಧಿಯಲ್ಲಿ ಇದನ್ನು ರೂಪಿಸಲಾಗಿದೆ. ಕಾಲೇಜಿನಲ್ಲಿ ನಡೆಸಿದ ಪ್ರಯೋಗವೂ ಯಶಸ್ವಿ ಆಗಿದೆ.
ಶರಣಬಸವಪ್ಪ ಅಪ್ಪಗೆ ಉಡುಗೊರೆ: ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಕೈಲಾಸ ಪಾಟೀಲ, ಪ್ರೊ.ಅಣ್ಣಾರಾವ ಪಾಟೀಲ, ಪ್ರೊ.ಶರಣು, ಪ್ರೊ.ಜಗದೀಶ ಪಾಟೀಲ, ಪ್ರೊ.ರಾಜಕುಮಾರ ವಡಗಾವೆ ಹಾಗೂ ಪ್ರಾಂಶುಪಾಲರು ಈ ರೊಬೊಟ್ ಅನ್ನು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅವರು ಮೊದಲ ದಿನ ನೀರು ಹಾಗೂ ಚಹಾ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಅಪ್ಪ ಅವರು ತಮ್ಮ ಕಚೇರಿಯಲ್ಲಿ ರೊಬೊಟ್ ಸೇವೆ ಪಡೆಯುತ್ತಿದ್ದಾರೆ. ಆವಿಷ್ಕಾರ ಮಾಡಿದವರಿಗೆ ಪ್ರಾಧ್ಯಾಪಕರಿಗೆ ₹1 ಲಕ್ಷ ಹಾಗೂ ಪ್ರಾಂಶುಪಾಲರಿಗೆ ₹2 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಈ ಹಣವನ್ನು ಸುಧಾರಿತ ರೊಬೊಟ್ ತಯಾರಿಕೆಗಾಗಿ ಬಳಸುವ ಚಿಂತನೆಯನ್ನು ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರು ಹೊಂದಿದ್ದಾರೆ.
**
ಹೈ.ಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇಂಥ ಆವಿಷ್ಕಾರ ನಡೆದಿರಲಿಲ್ಲ. ಪ್ರಾಥಮಿಕ ತಂತ್ರಜ್ಞಾನದ ರೊಬೊಟ್ ಇದಾಗಿದೆ. ಮುಂದೆ ವಿದ್ಯಾರ್ಥಿಗಳ ನೆರವಿನಿಂದಲೇ ಸುಧಾರಿತ ಯಂತ್ರ ಅಭಿವೃದ್ಧಿಪಡಿಸಲಾಗುವುದು.
–ಪ್ರೊ.ಕೈಲಾಸ್ ಪಾಟೀಲ, ಮಾರ್ಗದರ್ಶಕ