ಯಶಸ್ವಿಯಾಗಿ ಕಕ್ಷೆ ಸೇರಿದ ಜಿಸ್ಯಾಟ್–6
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ಜಿಸ್ಯಾಟ್ ಸರಣಿಯ ‘ಜಿಸ್ಯಾಟ್–6ಎ’ ಸಂಪರ್ಕ ಉಪಗ್ರಹವನ್ನು ಗುರುವಾರ ಸಂಜೆ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈ ಉಪಗ್ರಹವು ದೇಶದಲ್ಲಿ ಮೊಬೈಲ್ ಸಂಪರ್ಕವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲಿದೆ.
ಜಿಸ್ಯಾಟ್–6ಎ ಅನ್ನು ಹೊತ್ತಿದ್ದ ಭೂಸ್ಥಾಯಿ ಉಪಗ್ರಹ ಉಡಾವಣಾ ವಾಹನ (ಜಿಎಸ್‌ಎಲ್‌ವಿ)– ಎಫ್08 ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 4.56ಕ್ಕೆ ನಭದತ್ತ ಚಿಮ್ಮಿತು. ಪೂರ್ವನಿಗದಿಯಂತೆ ಮುಂದಿನ 18 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಗೆ ಸೇರಿಸಿತು.
ಮಹತ್ವ ಪಡೆದಿದ್ದ ಕಾರ್ಯಾಚರಣೆ: ರಾಕೆಟ್ ತಂತ್ರಜ್ಞಾನ ಮತ್ತು ಉಪಗ್ರಹದಲ್ಲಿ ಬಳಸಿದ್ದ ಹೊಸ ತಂತ್ರಜ್ಞಾನಗಳ ದೃಷ್ಟಿಯಿಂದ ಈ ಕಾರ್ಯಾಚರಣೆ ಹೆಚ್ಚು ಮಹತ್ವ ಪಡೆದುಕೊಂಡಿತ್ತು.
ಜಿಎಸ್‌ಎಲ್‌ವಿ–ಎಫ್08 ಮೂರು ಹಂತದ ಎಂಜಿನ್ ಹೊಂದಿತ್ತು. ಎರಡನೇ ಹಂತದ ಎಂಜಿನ್‌ನಲ್ಲಿ ಏಕ ಪ್ರಮಾಣದಲ್ಲಿ ಇಂಧನ ಪೂರೈಕೆ ಮಾಡಲು ಈ ಹಿಂದೆ ಹೈಡ್ರಾಲಿಕ್ ಆಕ್ಟಿವೇಟರ್ ಬಳಸಲಾಗುತ್ತಿತ್ತು. ಇದು ಕೆಡುವ ಸಾಧ್ಯತೆ ಹೆಚ್ಚು ಇತ್ತು. ಹೀಗಾಗಿ ಈ ಕಾರ್ಯಾಚರಣೆಯಲ್ಲಿ ಮೆಕ್ಯಾನಿಕಲ್ ಆಕ್ಟಿವೇಟರ್ ಬಳಸಲಾಗಿದೆ. ಇದು ಕೆಟ್ಟುಹೋಗುವ ಸಾಧ್ಯತೆ ತೀರ ಕಡಿಮೆ. ಹೊಸ ಅವತರಣಿಕೆಯ ‘ವಿಕಾಸ್’ ಎಂಜಿನ್ ಬಳಸಲಾಗಿದೆ.
ಮೂರನೇ ಹಂತದಲ್ಲಿ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಬಳಸಲಾಗಿದೆ. ಜಲಜನಕ ಮತ್ತು ಆಮ್ಲಜನಕಗಳನ್ನು ಅತ್ಯಂತ ಕಡಿಮೆ ಉಷ್ಣಾಂಶದಲ್ಲಿ (ಕ್ರಮವಾಗಿ –253 ಡಿಗ್ರಿ ಸೆಲ್ಸಿಯಸ್ ಮತ್ತು –183 ಡಿಗ್ರಿ ಸೆಲ್ಸಿಯಸ್) ದ್ರವ ರೂಪದಲ್ಲಿ ಪ್ರತ್ಯೇಕ ಟ್ಯಾಂಕ್‌ಗಳಲ್ಲಿ ಇರಿಸಿ, ಬಳಸಿಕೊಳ್ಳುವ ತಂತ್ರಜ್ಞಾನವಿದು. ಇವುಗಳನ್ನು ದ್ರವ ರೂಪದಲ್ಲಿ ಸಂಗ್ರಹಿಸುವುದರಿಂದ ಕಡಿಮೆ ಸ್ಥಳದಲ್ಲಿ ಹೆಚ್ಚು ಇಂಧನವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುವುದರಿಂದ ಎಂಜಿನ್ ಅಪಾರ ಪ್ರಮಾಣದ ಶಕ್ತಿ ಉತ್ಪಾದಿಸುತ್ತದೆ. ಅತ್ಯಂತ ದೊಡ್ಡ ಉಪಗ್ರಹಗಳನ್ನು ಉಡಾವಣೆ ಮಾಡಲು ಈ ತಂತ್ರಜ್ಞಾನ ಹೆಚ್ಚು ಅನುಕೂಲಕರ.
ಹೊಸ ಎಸ್–ಬ್ಯಾಂಡ್ ಆ್ಯಂಟೆನಾ
ಕೊಡೆಯಂತೆ ತೆರೆದುಕೊಳ್ಳುವ ಎಸ್–ಬ್ಯಾಂಡ್ ಆ್ಯಂಟೆನಾ ಈ ಉಪಗ್ರಹದಲ್ಲಿದೆ. ಇದು ಈವರೆಗೆ ಇಸ್ರೊ ಬಳಸಿದ ಎಲ್ಲಾ ಆ್ಯಂಟೆನಾಗಳಿಗಿಂತ 3 ಪಟ್ಟು ದೊಡ್ಡದು. ಇದು 5 ಬೀಮ್‌ಗಳ ಇನ್ಫ್ರಾರೆಡ್ ಕಿರಣಗಳನ್ನು ಹೊಮ್ಮಿಸುತ್ತದೆ. ಈ ಉಪಗ್ರಹವು ದೇಶದ ಯಾವುದೇ ಸ್ಥಳದಿಂದ ಉಪಗ್ರಹ ಆಧರಿತ ಮೊಬೈಲ್‌ಗಳ ಬಳಕೆಯನ್ನು ಸಾಧ್ಯವಾಗಿಸುತ್ತದೆ. ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ದತ್ತಾಂಶ ರವಾನೆ ಸಾಧ್ಯವಾಗಿಸುವ ಎಸ್–ಬ್ಯಾಂಡ್ ತರಂಗಾಂತರದ ಉಪಗ್ರಹವಿದು. 2 ಗಿಗಾಹರ್ಟ್ಸ್‌ನಿಂದ 4 ಗಿಗಾಹರ್ಟ್ಸ್‌ವರೆಗಿನ ಆವರ್ತನ (ಫ್ರೀಕ್ವೆನ್ಸಿ) ತರಂಗಾಂತರ ಇದಾಗಿದೆ. ಇಂದಿನ ಎಲ್ಲಾ 4ಜಿ ಸೇವೆಗಳು 2.5 ಗಿಗಾಹರ್ಟ್ಸ್ ಆವರ್ತನದ ತರಂಗಾಂತರವನ್ನೇ ಆಧರಿಸಿವೆ. ಹೀಗಾಗಿ ಭಾರತದಲ್ಲಿ ಮೊಬೈಲ್ ಸೇವೆಯನ್ನು ಇದು ಮತ್ತಷ್ಟು ಪರಿಣಾಮಕಾರಿಯಾಗಿಸಲಿದೆ.