ಬೆಂಗಳೂರು: ಉತ್ತರ ಪ್ರದೇಶದ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಗೋಹತ್ಯೆ ನಿಷೇಧ ಜಾರಿಗೊಳಿಸುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಜೈನ್ ಯುವ ಸಂಘಟನೆ ಹಮ್ಮಿಕೊಂಡಿದ್ದ ಭಗವಾನ ಮಹಾವೀರ ಜನ್ಮ ಕಲ್ಯಾನ ಮಹೋತ್ಸವದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯೋಗಿ ಆದ್ಯತ್ಯನಾಥ ಅವರು ಉತ್ತರ ಪ್ರದೇಶದಲ್ಲಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ದುಶ್ಚಟಗಳು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಗೋಹತ್ಯೆಯನ್ನೂ ನಿಷೇಧಿಸಿದ್ದಾರೆ. ರಾಜ್ಯದಲ್ಲಿ ಕೂಡ ಇದೇ ಮಾದರಿಯ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಈ ಮೂಲಕ ಸಂತರು, ಮುನಿಗಳ ಆಶಯದಂತೆ ಅಹಿಂಸಾ ತತ್ವ ಪಾಲಿಸಲಾಗುವುದು ಎಂದು ಹೇಳಿದರು.
ಮತದಾರರಿಗೆ ಅದರಲ್ಲೂ ಜಗತ್ತಿಗೆ ಅಹಿಂಸೆಯ ತತ್ವ ಸಾರಿದ ಜೈನ ಸಮುದಾಯವು ಮಹಾವೀರರ ಆಶಯದಂತೆ ಆಡಳಿತ ನಡೆಸುವ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅಪ್ಪಟ ಶಾಖಾಹಾರಿ. ಅಷ್ಟೇ ಅಲ್ಲ, ಅತ್ಯಂತ ಕಠಿಣ ಉಪವಾಸ-ವ್ರತಗಳನ್ನೂ ಕೂಡ ಅನುಸರಿಸುತ್ತಾರೆ. ಇದು ಅವರ ವಿದೇಶಿ ಪ್ರವಾಸ ಸಂದರ್ಭದಲ್ಲೂ ಜಾರಿಯಲ್ಲಿರುತ್ತದೆ. ಇದು ಪ್ರಧಾನಿ ಅವರ ಬದ್ಧತೆ ಎಂದು ತಿಳಿಸಿದರು.
ಸಾಮಾನ್ಯವಾಗಿ ರಾಜಕಾರಣಿಗಳು ಗಾಳಿ ಬೀಸಿದ ಕಡೆ ಹೋಗುತ್ತಾರೆ. ಸಂದರ್ಭಕ್ಕೆ ಅನುಗುಣವಾಗಿ ಮಠ-ಮಂದಿರ, ಮಸೀದಿ-ಚರ್ಚ್‌ಗಳು ನೆನಪಾಗುತ್ತವೆ. ಆದರೆ, ನಾನು ಪ್ರತಿ ವರ್ಷ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವಕ್ಕೆ ಬರುತ್ತೇನೆ. ನನ್ನ ಉಸಿರು ಇರುವವರೆಗೂ ಇದನ್ನು ಪಾಲಿಸುತ್ತೇನೆ ಎಂದರು.
ಇದಕ್ಕೂ ಮುನ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕೇವಲ ಒಂದು ಪಕ್ಷ ಅಥವಾ ವ್ಯಕ್ತಿಯಿಂದ ಇಡೀ ದೇಶ ಅಭಿವೃದ್ಧಿ ಹೊಂದುವುದಿಲ್ಲ. ಅದಕ್ಕೆ ಪ್ರತಿಯೊಬ್ಬರ ಕೊಡುಗೆಯೂ ಮುಖ್ಯವಾಗಿದೆ. ಹಾಗಾಗಿ, ಜೈನ ಸಮುದಾಯ ಯಾವೊಂದು ಪಕ್ಷಕ್ಕೆ ಸೀಮಿತವಾಗಬಾರದು. ಎಲ್ಲ ರಾಜಕೀಯ ಪಕ್ಷಗಳೊಂದಿಗೂ ಇರಬೇಕು ಎಂದು ಹೇಳಿದರು.
“ಅಹಿಂಸಾ ಸರ್ಕಾರ ಬರಲಿ’: ಈ ವೇಳೆ ಮಾತನಾಡಿದ ಆಚಾರ್ಯ ಚಂದ್ರಯಶಸೂರಿಶ್ವರಜಿ ಮಹಾರಾಜ್ ಮಾತನಾಡಿ, ಇಂತಹದ್ದೇ ಪಕ್ಷ ಅಧಿಕಾರಕ್ಕೆ ಬರಲಿ ಎಂಬ ಬೇಡಿಕೆ ನಮ್ಮದಲ್ಲ; ಅಹಿಂಸೆಯನ್ನು ಪ್ರತಿಪಾದಿಸುವ ಸರ್ಕಾರ ರಚನೆ ಆಗಬೇಕು ಎಂಬುದು ಸಮುದಾಯದ ಆಕಾಂಕ್ಷೆ ಎಂದು ತಿಳಿಸಿದರು.
ಮುಕ್ತಿಸಾಗರ್ ಸೂರಿಜಿ ಮಹಾರಾಜ್, ಆದಿತ್ಯಸಾಗರಜಿ ಮಹಾರಾಜ್, ಶಾಸನಶ್ರೀ ಕಮಚನ್ ಪ್ರಭಾಜಿ, ಸಮಣಿ ಪ್ರಮುಖಾ ಶ್ರೀನಿಧಿಜಿ, ಜೈನ ಯುವ ಸಂಘಟನೆ ಸೇವಾ ಟ್ರಸ್ಟ್ ಅಧ್ಯಕ್ಷ ಬಿಕಂಚಂದ್ ಮುಣೋತ್, ಪಾಲಿಕೆ ಸದಸ್ಯರಾದ ಲತಾ ನವೀನ್ ತೇಜಸ್ವಿ, ಲೀಲಾ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.