ಹೊನ್ನಾವರ: ಹೊನ್ನಾವರ ತಾಲೂಕಿನ ಲಯನ್ಸ್ ಸಭಾಭವನದಲ್ಲಿ ಕಾರವಾರ, ಕುಮಟಾ – ಹೊನ್ನಾವರ, ಭಟ್ಕಳ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಯುವ ಸಮಾವೇಶ ನಡೆಯಿತು.
ಬಿಜೆಪಿ ಯುವ ಮೋರ್ಚಾ ವತಿಯಿಂದ ಅನಂತ ಕುಮಾರ್ ಹೆಗಡೆಯವರ ನೇತೃತ್ವದಲ್ಲಿ ನಡೆದ ಯುವ ಸಮಾವೇಶ ತಾಲೂಕಿನ ಲಯನ್ಸ ಸಭಾಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಯುವಕರು ಹೆಚ್ಚಿನ ಜವಾಬ್ಧಾರಿಯ ಮೂಲಕ ಮತದಾನ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ಯುವ ಸಮಾವೇಶ ಹಮ್ಮಿಕೊಂಡಿದ್ದು ಯುವಕರು ಪ್ರತಿ ಬೂತ್ ಮಟ್ಟದಲ್ಲಿ ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಕೇಂದ್ರ ಸಚಿವರಾದ ಅನಂತ್ ಕುಮಾರ ಹೆಗಡೆ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮದು ಪ್ರಜಾಸತ್ತಾತ್ಮಕ ದೇಶ. ಪ್ರಜೆಗಳ ಮತವನ್ನು ಸ್ವೀಕರಿಸಿ, ಅದಕ್ಕೆ ಪೂರಕವಾಗಿ ಸರಕಾರ ನಡೆಸಬೇಕೆಂಬುದೇ ಪ್ರಜಾತಂತ್ರದ ಆಶಯ, ಅಭಿಪ್ರಾಯ. ಸರಕಾರವು ಜನಾಭಿಪ್ರಾಯದಂತೆ ನಡೆಯುತ್ತಿರಬೇಕು. ಜನಕ್ಕೆ ಬೇಕಾದ ಆಹಾರ, ವಸತಿ, ಶಿಕ್ಷಣ, ನೀರು, ಬೆಳಕು, ಔಷಧಿ ಇತ್ಯಾದಿಗಳ ಸಮರ್ಪಕ ಅರಿವು, ಹಂಚಿಕೆ ಎಲ್ಲವನ್ನೂ ಸರಕಾರವೇ ನಡೆಸಬೇಕು. ಈ ಕಾರಣದಿಂದಲೇ ಆಯಾ ಪ್ರದೇಶದ ಪರವಾಗಿ ಮತದಾನದ ಮೂಲಕ ಯೋಗ್ಯ ಪ್ರತಿನಿಧಿಗಳನ್ನು ಆರಿಸಿ, ಸರಕಾರ ನಡೆಸಲು ಕಳಿಸುವ ಗುರುತರ ಹೊಣೆಗಾರಿಕೆ ಎಲ್ಲಾ ಜನಗಳದ್ದು. ಇಂತಹ ಚುನಾವಣೆಗಳು ಪ್ರಜಾತಂತ್ರದ ಆಧಾರಗಳೂ ಆಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಕೆಲವೊಂದು ಮಾಧ್ಯಮಗಳಲ್ಲಿ ಬಿ.ಜೆ.ಪಿ ಟಿಕೇಟ್ ಹಂಚಿಕೆ ಮಾಡಿದ್ದು ಕೇವಲ ಕಪೋಲಕಲ್ಪಿತ ಸುದ್ದಿಯಾಗಿದ್ದು ಇಂತಹ ಗಾಳಿಸುದ್ದಿಗಳಿಗೆ ಕಾರ್ಯಕರ್ತರು ಕಿವಿಗೊಡಬಾರದು ಎಂದು ಕೇಂದ್ರ ಸಚೀವ ಅನಂತ ಕುಮಾರ್ ಹೆಗಡೆ ಹೇಳಿದರು.
ಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷನಿಷ್ಟರಿಗೆ , ಪಕ್ಷದ ಮೂಲ ತತ್ವ ಸಿದ್ದಾಂತದಡಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಅಲ್ಲದೇ ನಿಮ್ಮ ಮನಸಿಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂದು ಭಾವಿಸಿದ್ದಿರೋ ಅವರಿಗೆ ಪಕ್ಷದಿಂದ ಟಿಕೇಟ್ ನೀಡಲಾಗುವದು ಎಂದು ಹೇಳಿದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖ ಸುಬ್ರಾಯ ನಾಯ್ಕ, ದೀಪಕ್ ಶೇಟ್ ಮಂಜುನಾಥ ಜನ್ನು, ಸುನಿಲ್ ನಾಯ್ಕ ಉಪಸ್ಥಿತರಿದ್ದರು.