ಕುಮಟಾ: ಬಾಡದ ಕಾಂಚಿಕಾಂಬಾ ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಸಂಭ್ರಮ, ಒಂದೆಡೆ ದೇವರಿಗೆ ಹಣ್ಣು ಕಾಯಿ ಹರಕೆ ತೀರಿಸುವ ಜನರಾದರೆ ಇನ್ನೊಂದೆಡೆ ಪೇಟೆ ಹಾಗೂ ಸಿಹಿ ತಿಂಡಿಗಳ ಖರೀದಿ ಬಹಳ‌ ಜೋರು.

ರಾಜ್ಯ ಹಾಗೂ ಪರ‌ರಾಜ್ಯದ ಭಕ್ತರನ್ನು ಹೊಂದಿರುವ ಈ ದೇವಾಲಯಕ್ಕೆ ಜಾತ್ರೆಯಂದು ಸಹಸ್ರಾರು ಜನರು ಆಗಮಿಸಿ ಹರಕೆ ತೀರಿಸಿ ಕ್ರತಾರ್ಥರಾಗುತ್ತಾರೆ. ಇಂತಹ ಜಾತ್ರಾ ಸಂಭ್ರಮ ಇಂದು ಇಲ್ಲಿ ನಡೆಯಿತು.

ಬಾಡದ ಕಾಂಚಿಕಾಂಬಾ ದೇವಾಲಯದ ಇತಿಹಾಸ.

ಕಲಭ ಎಂಬ ರಾಜನು ಸಹಸ್ರಾರು ವರ್ಷಗಳ ಹಿಂದೆ ಗೋಕರ್ಣ ಮಂಡಳದ ಅರಸನಾಗಿ ರಾಜ್ಯವಾಳುತ್ತಿದ್ದ. ಒಂದು ದಿನ ಅವನಿಗೆ ಕನಸಿನಲ್ಲಿ ದಿವ್ಯ ದರ್ಶನವಿತ್ತ ದೇವಿ, ಕಾಗಾಲ್-ಅಘನಾಶಿನಿ-ಗುಡ್ಡದಲ್ಲಿರುವ ಅಗಸ್ತ್ಯಾಶ್ರಮದ ದಕ್ಷಿಣಕ್ಕೆ ಸಮುದ್ರ ತೀರದ ಕಿರುಗುಡ್ಡ ಅಂಚಿನಲ್ಲಿ ಚಾಕ್ರಾಯಣಿ ಕ್ಷೇತ್ರವಿದೆ. ಅಲ್ಲಿ ಗುಡಿಯೊಂದನ್ನು ಕಟ್ಟಿಸಿ ನನ್ನ ಮೂರ್ತಿ ಪ್ರತಿಷ್ಠಾಪಿಸು. ಇದರಿಂದ ನಿನಗೂ ,ನಿನ್ನ ಪ್ರಜೆಗಳಿಗೂ ಕಲ್ಯಾಣವಾಗುವುದು ಎಂದು ಆದೇಶಿಸಿದಳು.

ಅದರಂತೆ ಮಹಿಷಾಸುರ ಮರ್ಧಿನಿ ರೂಪವಿರುವ 54 ಅಂಗುಲ ಎತ್ತರದ ಮೂರ್ತಿಯನ್ನು ಕಂಚಿ ದೇಶದಿಂದ ತರಸಿ ಚಾಕ್ರಾಯಣಿ(ಚವನ ಋಷಿ) ಋಷಿಗಳ ಅಮೃತ ಹಸ್ತದಿಂದ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿದನು. `ಕಂಚಿ’ ದೇಶದಿಂದಮೂರ್ತಿಯನ್ನು ತರಿಸಿದ ಪ್ರಯುಕ್ತ `ಕಾಂಚಿಕಾಂಬಾ’ ಎಂಬ ಅನ್ವರ್ಥಕ ನಾಮ ಇಟ್ಟಿದ್ದಾರೆ ಎಂದು ಹೇಳಲಾಗುತ್ತದೆ.

ಸ್ಥಳೀಯ ಜನರ ಇನ್ನೊಂದು ನಂಬಿಕೆ

ಒಬ್ಬ ಹಳ್ಳೇರ ಮಹಿಳೆಯು ಒಣಗಿದ ಎಲೆಯನ್ನು ಬುಟ್ಟಿಯಲ್ಲಿ ತುಂಬುತ್ತಿರುವಾಗ, ಚಾಕ್ರಾಯಣಿ ಕ್ಷೇತ್ರ ಸಮೀಪ ಅವಳಿಗೊಂದು ಗೊಂಬೆ ಸಿಕ್ಕಿತು. ತನ್ನ ಮಗುವಿಗೆ ಆಡಲೆಂದು ಅದನ್ನು ಬುಟ್ಟಿಯಲ್ಲಿ ಎತ್ತಿಟ್ಟುಕೊಳ್ಳುತ್ತಾಳೆ. ತುಂಬಿದ ಬುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಬುಟ್ಟಿ ಭಾರವಾಗುತ್ತ ಹೋಯಿತು. ಹೆಜ್ಜೆ ಇಡಲಾರದಷ್ಟು ಭಾರವಾದಾಗ ಅಲ್ಲೆ ಸಮೀಪದ ಆಲದ ಕಟ್ಟೆಯ ಹತ್ತಿರ ಬುಟ್ಟಿ ಇಟ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಾಳೆ. ಯಾಕೆ ಹೀಗಾಯಿತೆಂದು ಯೋಚಿಸುತ್ತಿರುವಾಗ, ಬುಟ್ಟಿಯಲ್ಲಿ ಗೊಂಬೆ ಇರುವುದು ನೆನಪಿಗೆ ಬರುತ್ತದೆ. ಬೊಂಬೆಯನ್ನು ತೆಗೆದು ಕಟ್ಟೆಯ ಮೇಲಿಟ್ಟು ಹೊರಡುತ್ತಾಳೆ. ದೈವ ಧರ್ಮಾಭಿಮಾನಿಯಾದ ಅಂದಿನ ಜನ ಆ ಗೊಂಬೆಯನ್ನು ಪೂಜಿಸಲಾರಂಭಿಸಿದರು. ಕ್ರಮೇಣ ಕಟ್ಟೆಯ ಮೇಲಿದ್ದ ಗೊಂಬೆಯ ತದ್ರೂಪಿ ಮೂರ್ತಿಯನ್ನು ಗುಡ್ಡದ ನೆತ್ತಿಯ ಮೇಲೆ ಪ್ರತಿಷ್ಠಾಪಿಸಲಾಯಿತು ಎಂಬ ಮಾತು ಪ್ರತೀತಿಯಲ್ಲಿದೆ. ಆ ಮಹಿಳೆ ಗೊಂಬೆ ಇಟ್ಟ ಕಟ್ಟೆ `ಗೊಂಬೆ ಕಟ್ಟೆ’ಯಾಗಿ ಇಂದಿಗೂ ಇದೆ. ಹಳ್ಳೇರ ಮಹಿಳೆಗೆ ಸಿಕ್ಕ ಅದೇ ಗೊಂಬೆಯನ್ನು ಕಲಭರಾಜನು ದೇವಿಯ ಅಪ್ಪಣೆಯಂತೆ ಪ್ರತಿಷ್ಠಾಪಿಸಿದನು ಎಂಬುದಕ್ಕೆ ಪೂರಕವಾಗಿ ಕೆಲವು ಉತ್ಸವ ರಿವಾಜುಗಳಿವೆ. ಜಾತ್ರೆಗೆ ಸಂಬಂಧಪಟ್ಟ ಪ್ರಥಮ ಕರೆಯನ್ನು ಮಡಿಯುಟ್ಟ ಹರಜನರು ಜಾಗಟೆ ಬಾರಿಸುತ್ತ ಮೂರು ಗ್ರಾಮಕ್ಕೂ ಸಾರುತ್ತಾರೆ. ಉತ್ಸವದ ಸಮಯದಲ್ಲಿ ಅವರದೇ ಆದ ವಾದ್ಯ ಮೇಳದಿಂದ ದೇವರ ಸವಾರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹರಿಜನ ಪರಿವಾರದ ದೇವರ ಕಳಸ, ಅಮ್ಮಣವರ ಉತ್ಸವ ಕಾಲದಲ್ಲಿ ಎಲ್ಲ ಪರಿವಾರ ದೇವರ ಕಳಸಗಳಿಗಿಂತ ಮುಂದಾಗಿ ಹೋಗುತ್ತದೆ. ಹರಿಜನ ಮಹಿಳೆಗೆ ಸಿಕ್ಕ ದೇವಿ ಮೂರ್ತಿ ಕಲಭ ರಾಜ ಪ್ರತಿಷ್ಠಾಪಿಸಿ, ದೇವ ಕಾರ್ಯದ ಪ್ರಥಮ ಸೇವಾ ಮರ್ಯಾದೆಯನ್ನು ಸಾಂಪ್ರದಾಯಿಕವಾಗಿ ಹಾಕಿದನು.

RELATED ARTICLES  ಮಾನವಾರಾಗಿ ಹುಟ್ಟಿ ಬರುವುದೇ ಒಂದು ದೊಡ್ಡ ಭಾಗ್ಯ : ಶಂಕ್ರಯ್ಯ ಸ್ವಾಮಿ ಕಲ್ಮಠ

ಜಾತ್ರಾ ಸಂಭ್ರಮ: ಎಂಟು ದಿನ ಮೊದಲು ಡಂಗುರ ಸಾರುವ ಮೂಲಕ ಜಾತ್ರೆ ಸನಿಹ ಬಂದಿತೆಂದು ಸಂದೇಶವನ್ನು ನೀಡಲಾಗುತ್ತದೆ. ಇದಾದ ಎರಡು ದಿನದ ನಂತರ ತೇರು ಕಟ್ಟಲು ಪ್ರಾರಂಭಿಸುತ್ತಾರೆ. ಈ ದಿನದಿಂದಲೇ ಕುಲುಲಿ ಕುದುರೆ ಮಧ್ಯ ರಾತ್ರಿ ನಾಮಧಾರಿ ಸಮಾಜದ ಹೋನ್ನು ಮನೆಯವರು ಜಾತ್ರೆಯ ಸಡಗರ ಪ್ರರ೦ಭಿಸುತ್ತರೆ.ಪರಿವಾರ ದೇವರುಗಳ ಕಳಸಗಳು ಏಳಲು ಪ್ರಾರಂಭವಾಗುತ್ತದೆ. ಇದನ್ನು ತೊಡಕಲಶ(ಮೊದಲನೆ ಕಲಶೋತ್ಸವ) ಎನ್ನುವರು. ಹಿಂದಿನಿಂದಲೂ ಕಾಗಾಲ್ ಗ್ರಾಮದ ಹಾಲಕ್ಕಿ ಒಕ್ಕಲ ಸಮುದಾಯದವರು ಈ ದಿನದಿಂದ ತೇರು ಕಟ್ಟಲು ಪ್ರಾರಂಭಿಸುವರು.

ಹೂವಿನ ಮಕ್ಕಳು: ಜಾತ್ರಾ ಉತ್ಸವದಲ್ಲಿ ನಾಲ್ಕು ಕಳಸಗಳು ಏಳಲಿದ್ದು, ಅದರ ಜತೆಯಲ್ಲಿ ಸೀರೆಯನ್ನು ಗಂಡುಡುಗೆಯಂತೆ ಧರಿಸಿ, ತಲೆ ಮೈಕೈಗಳಿಗೆ ಹೂವಿನ ಮಾಲೆ ಕಟ್ಟಿಕೊಂಡ ತರುಣರು ಮೌನವಾಗಿ ನಡೆದು ಬರುತ್ತಾರೆ. ಇವರನ್ನು ಹೂವಿನ ಮಕ್ಕಳು ಎಂದು ಕರೆಯಲಾಗುತ್ತದೆ. ಇವರ ಕುಣಿತವು ಬಹು ಆಕರ್ಷಣೀಯವಾಗಿದ್ದು, ಗದ್ದೆಯನ್ನು ಉತ್ತಿ, ಬಿತ್ತಿ, ನಾಟಿ ಮಾಡಿ, ತೆನೆ ಕೊಯ್ದು, ಹೊರೆಕಟ್ಟಿ, ಕುತ್ತರಿ ಹಾಕಿ, ಬೆಳೆಯನ್ನು ಮನೆಗೆ ಹೊತ್ತೊಯ್ಯುವವರೆಗಿನ ಕಾರ್ಯಗಳನ್ನು ಅಭಿನಯಿಸುತ್ತಾರೆ.

ಬಾಡದ ಜಾತ್ರೆ: ಚತುರ್ದಶಿ ದಿನ ಹಗಲು ರಾತ್ರಿ ಸುತ್ತ ಮುತ್ತಲಿನ ಗ್ರಾಮಗಳೆಲ್ಲ, ಮರುದಿನದ ಜಾತ್ರಾ ತಯಾರಿ ಚಟುವಟಿಕೆಯಲ್ಲಿ ತೊಡಗಿರುತ್ತದೆ. ರಥ ಬೀದಿಯಲ್ಲಂತರೂ ಜಾತ್ರಾ ಸಡಗರದ ತಯಾರಿ ಬಿರುಸಾಗಿ ನಡೆದಿರುತ್ತದೆ. ಚೈತ್ರ ಶುದ್ಧ ಹುಣ್ಣಿಮೆ ದಿನ ಬಾಡದ ಜಾತ್ರೆ. ಅಂದು ಸುತ್ತ ಮುತ್ತಲಿನ ಹಳ್ಳಿಗಳಷ್ಟೇ ಅಲ್ಲದೆ ರಾಜ್ಯದ ಅನೇಕ ಕಡೆಗಳಿಂದ ಹಾಗೂ ಅನ್ಯ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸಿ ದೇವಿ ದರ್ಶನ ಪಡೆದು, ಹರಕೆ ತಲುಪಿಸುತ್ತಾರೆ . ಅವುಗಳಲ್ಲಿ ಉಡಿ ತುಂಬುವುದು, ತುಲಾಭಾರ, ಎತ್ತು ಹರಿಸುವುದು ಪ್ರಮುಖವಾಗಿದೆ. ಅಂದು ಸಂಜೆ 4ಗಂಟೆ ಸುಮಾರಿಗೆ ದೇವಿಯ ಪಲ್ಲಕ್ಕಿಯನ್ನು ಉತ್ಸವ ರಥದ ಸಮೀಪ ತರಲಾಗುತ್ತದೆ. ದೇವಿಗೆ ಸಲ್ಲಿಸಬೇಕಾದ ಪೂಜೆಗಳು ಮುಗಿದ ನಂತರ ಉತ್ಸವ ಮೂರ್ತಿಯನ್ನು ರಥದೊಳಗೆ ಕುಳ್ಳಿರಿಸಲಾಗುತ್ತದೆ.

RELATED ARTICLES  ಬಿಜೆಪಿಗರ ಬಣ್ಣ ಬಯಲು ಮಾಡಲು ಜನಜಾಗೃತಿ ಸಮಾವೇಶ

ರಥಕಾಣಿಕೆ: ರಥಕಾಣಿಕೆ ಹರಕೆ ಹೊತ್ತವರು ರಥದ ಗಡ್ಡೆಗೆ ಕಾಯಿ ಒಡೆದು ಹರಕೆ ತೀರಿಸುತ್ತಾರೆ. ಈ ಸಂದರ್ಭದಲ್ಲಿ ಹೂವಿನ ಮಕ್ಕಳು ಜೋಕಾಲಿ ಕಂಬವನ್ನು ಏರಿ, ಚಕ್ರಾಕಾರವಾಗಿ ತೂಗುತ್ತಾರೆ. ಇಡಗಾಯಿ ಒಡೆದಾದ ನಂತರ ರಥವನ್ನು ಎಳೆಯಲಾಗುತ್ತದೆ. ಚಲಿಸುವ ರಥಕ್ಕೆ ಬಾಳೆ ಹಣ್ಣು ಹೊಡೆಯುವ ಮೂಲಕ ಆಸ್ಥಿಕರು ಸಂಭೃಮಿಸುತ್ತಾರೆ. ರಾತ್ರಿ 10ರ ಸುಮಾರಿಗೆ ಮೃಗಭೇಟೆ ನಡೆದು, ಭೂತ ಬಲಿಯೊಂದಿಗೆ ಜಾತ್ರೆಯ ಚಟುವಟಿಕೆಗಳು ಮುಕ್ತಾಯವಾಗುತ್ತದೆ. ಬಾಡ, ಕಾಗಾಲ ಮತ್ತು ಹೊಲನಗದ್ದೆ ಎಂಬ ಮೂರು ಗ್ರಾಮಗಳ ಅಧಿದೇವತೆ ಶ್ರೀ ಕಾಂಚಿಕಾ ಪರಮೇಶ್ವರಿ. ಈ ಮೂರು ಗ್ರಾಮಗಳನ್ನು ಕಂದಾಯ ಇಲಾಖೆ ಏಳು ಗ್ರಾಮಗಳನ್ನಾಗಿ ವಿಂಗಡಿಸಿದ್ದರಿಂದ, ಏಳೂ ಗ್ರಾಮದ ಜನರು ಮಹಾತಾಯಿಯನ್ನು ಆರಾಧಿಸುತ್ತಾರೆ. ಸಂಕಷ್ಟ ನಿವಾರಣೆಗಾಗಿ ಹರಕೆ ಹೊತ್ತು ಭಕ್ತಿಯಿಂದ ಬೇಡಿದರೆ ಬಯಕೆ ಈಡೇರಿಸಿಕೊಳ್ಳುತ್ತಿದ್ದಾರೆ. ಅಮ್ಮಾ ಎಂದು ಶ್ರದ್ಧಾ ಭಕ್ತಿಯಿಂದ ಬೇಡಿ ಕೊಂಡರೆ, ದೇವಿ ಖಂಡಿತಾ ಬೇಡಿಕೆ ಈಡೇರಿಸುತ್ತಾಳೆ. ಇದಕ್ಕೆ ಸಾವಿರಾರು ನಿದರ್ಶನಗಳು ಜನಜನಿತವಾಗಿದೆ. ಶ್ರೀ ದೇವಿಯ ಕಲ್ಯಾಣ ಮಂಟಪದಲ್ಲಿ ಮದುವೆ & ಅನೇಕ ಸಾಂಸ್ಕ್ರತಿಕ ಕಾರ್ಯಕ್ರಮ ನೆರವೇರುತ್ತೆ. ಇಲ್ಲಿ ಬರುವ ಭಕ್ತರಿಗೆ ಭಾನುವಾರ , ಮಂಗಳವಾರ ಮತ್ತು ಶುಕ್ರವಾರ ಅನ್ನದಾನವು ಮದ್ಯಾನ್ಹ ೧೨.೩೦ಕ್ಕೆ ಶ್ರೀ ದೇವಿಯ ಮಹಾ ಮಂಗಳಾರತಿ ನಂತರ ನಿರಾಳವಾಗಿ ನೆರವೇರುತ್ತೆ.