ಹೆಚ್ಚೂ ಕಡಿಮೆ 1 ತಿಂಗಳ ಹಿಂದಿನಿಂದಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದವು. ಇದೀಗ ವಿಧಾನಸಭೆ ಚುನಾವಣೆಗೆ ದಿನಾಂಕ ಕೂಡ ಘೋಷಣೆಯಾಗಿದ್ದು, ರಾಜಕೀಯ ಚದುರಂಗದಾಟ ಮತ್ತಷ್ಟು ಜೋರಾಗಿದೆ. ಅದರಲ್ಲೂ ಎಲ್ಲಾ ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿಗಳ ಲಾಭಿ ಭರ್ಜರಿಯಾಗಿದೆ. ಕೆಲವರಂತೂ ನಂಗೇ ಟಿಕೆಟ್ ಕನ್ಫರ್ಮ್ ಅಂತ ಭರವಸೆಯಿಂದ ಓಡಾಡ್ತಿದ್ರೆ, ಮತ್ತೆ ಹಲವರು ಈ ಬಾರಿ ನಮಗೇ ಟಿಕೆಟ್ ಕೊಡಬೇಕು ಅಂತ ಹಿರಿಯ ನಾಯಕರ ಮೇಲೆ ಒತ್ತಡ ಹಾಕ್ತಿದ್ದಾರೆ.
ಮೂರು ಪ್ರಮುಖ ಪಕ್ಷಗಳ ಪೈಕಿ ಈಗಾಗಲೇ ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದ್ರೆ, ಬಿಜೆಪಿ ಮತ್ತು ಕಾಂಗ್ರೆಸ್ನ ಅಭ್ಯರ್ಥಿಗಳು ಯಾರು ಅನ್ನೋ ಕುತೂಹಲ ಇನ್ನೂ ತಣಿದಿಲ್ಲ. ಪಟ್ಟಿ ಇವತ್ತು ಬಿಡುಗಡೆ ಆಗಬಹುದು, ನಾಳೆ ಬಿಡುಗಡೆಯಾಗಬಹುದು ಅಂತ ಟಿಕೆಟ್ ಆಕಾಂಕ್ಷಿಗಳು ಕೂಡ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಸದ್ಯಕ್ಕೆ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡೋದಿಲ್ಲ. ಎರಡೂ ಪಕ್ಷಗಳ ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಆಗೋದು ಏಪ್ರಿಲ್ 9ರ ಬಳಿಕವೇ ಅಂತ ಎಕ್ಸ್ಕ್ಲ್ಯೂಸಿವ್ ಮಾಹಿತಿ ಲಭ್ಯವಾಗಿದೆ.
ಅಂದರೆ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಏಪ್ರಿಲ್ 2ನೇ ವಾರದಲ್ಲಿ ಪ್ರಕಟವಾಗಲಿದೆ. ಎರಡೂ ಪಕ್ಷಗಳ ಆಂತರಿಕ ನಿಯಮಗಳ ಅನುಸಾರ ಮತ್ತು ಹೈ ಕಮಾಂಡ್ಗಳ ಅನುಮೋದನೆ ಸಿಕ್ಕ ಬಳಿಕವೇ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವುದು. ಹೀಗಾಗಿ ಏಪ್ರಿಲ್ 9ರ ಬಳಿಕವೇ ಲಿಸ್ಟ್ ಬಿಡುಗಡೆಯಾಗುವ ನಿರೀಕ್ಷೆಯನ್ನ ಎರಡೂ ಪಕ್ಷಗಳ ನಾಯಕರು ಹೊಂದಿದ್ದಾರೆ.
ಕಾಂಗ್ರೆಸ್ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, 130 ಅಭ್ಯರ್ಥಿಗಳನ್ನೊಳಗೊಂಡ ಮೊದಲ ಪಟ್ಟಿ ಬಿಡುಗಡೆಯಾಗುತ್ತೆ ಎನ್ನಲಾಗ್ತಿದೆ. ಅದರಲ್ಲೂ ಈ ಪಟ್ಟಿಯಲ್ಲಿ ಹೊಸ ಹೆಸರುಗಳೇ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆಯಂತೆ. ಪಕ್ಷದಲ್ಲಿ ಆತಂರಿಕ ಸಮೀಕ್ಷೆ ನಡೆಸಲಾಗಿದ್ದು, ಅದರ ವರದಿಯಂತೆ ಗೆಲ್ಲುವ ಸಾಧ್ಯತೆ ಅತೀ ಕಡಿಮೆ ಇರುವ ಹಾಲಿ ಶಾಸಕರನ್ನ ಕೈಬಿಡಲು ಉದ್ದೇಶಿಸಲಾಗಿದೆ ಅಂತ ಹೇಳಲಾಗ್ತಿದೆ. ಅವರ ಸ್ಥಾನದಲ್ಲಿ ಹೊಸ ಮುಖಗಳಿಗೆ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆಯಂತೆ. ಹೀಗಾಗಿ ಮೊದಲ ಪಟ್ಟಿಯಲ್ಲೇ ಹೊಸ ಹೆಸರುಗಳು ಕಾಣಬಹುದು ಅನ್ನೋ ನಿರೀಕ್ಷೆ ಇದೆ.
ಇನ್ನು, ಬಿಜೆಪಿಯ ಮೊದಲ ಪಟ್ಟಿ ಕೂಡ ಏಪ್ರಿಲ್ 8 ಅಥವಾ 9ರಂದು ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈಗಾಗಲೇ ಟಿಕೆಟ್ಗಾಗಿ ಪೈಪೋಟಿ ಜೋರಾಗಿದೆ. ಸಾಕಷ್ಟು ಮಂದಿ ಟಿಕೆಟ್ ನಂಗೇ ಸಿಗುತ್ತೆ ಅನ್ನೋ ನಂಬಿಕೆಯನ್ನೂ ಹೊಂದಿದ್ದಾರೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಯಾರ ಹೆಸರುಗಳು ಕಾಣಿಸಿಕೊಳ್ಳಬಹುದು ಅನ್ನೋ ಕುತೂಹಲ ಹೆಚ್ಚಾಗಿದೆ. ಬಿಜೆಪಿಯ ಫಸ್ಟ್ ಲಿಸ್ಟ್ನಲ್ಲಿ 80 ಅಭ್ಯರ್ಥಿಗಳ ಹೆಸರುಗಳನ್ನ ನಿರೀಕ್ಷಿಸಬಹುದು ಅಂತ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ಪಟ್ಟಿ ಆಂತರಿಕ ಸಮೀಕ್ಷೆಯ ಪ್ರತಿಬಿಂಬ ಅಂದರೆ ತಪ್ಪಾಗದು ಅಂತಲೂ ಹೇಳಲಾಗ್ತಿದೆ. ಬಿಜೆಪಿ ಕೂಡ ಗೆಲ್ಲೋ ಕುದುರೆಯನ್ನೇ ಆಯ್ಕೆ ಮಾಡಲು ಸಮೀಕ್ಷೆ ಮಾಡಿಸಿದ್ದು, ಹೆಚ್ಚಾಗಿ ಗೆಲ್ಲುವ ಸಾಧ್ಯತೆ ಇರೋ ಅಭ್ಯರ್ತಿಗಳ ಹೆಸರನ್ನೇ ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಲಿದೆ. ಈ ಪಟ್ಟಿಯಲ್ಲಿ ಜಾತಿ ಲೆಕ್ಕಾಚಾರದ ಮೇಲೂ ಹೆಸರುಗಳು ಕಾಣಿಸಿಕೊಳ್ಳಬಹುದು ಅಂತ ಹೇಳಲಾಗ್ತಿದೆ.