ಭಟ್ಕಳ: ಕರಾವಳಿಯ ಶರಾವತಿ ನದೀ ತೀರದ ಸುಮಾರು 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಗಲ್ಫ್‍ನಲ್ಲಿ ಸ್ಥಾಪಿತ ಕೆನರಾ ಮುಸ್ಲಿಮ್ ಖಲೀಝ್ ಕೌನ್ಸಿಲ್ ನ ಮಹಾಸಭೆಯು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾವನ್ನು ತೆಗೆದುಕೊಂಡಿದೆ ಎಂದು ಕೌನ್ಸಿಲ್ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್ ತಿಳಿಸಿದ್ದಾರೆ.
ಸೌದಿ ಅರೆಬಿಯಾದ ಜಿದ್ದಾ ದಲ್ಲಿ ನಡೆದ ಮಹಾಸಭೆಯಲ್ಲಿ ಕರ್ನಾಟಕ ಕರಾವಳಿಯ ಶರಾವತಿ ನದಿತೀರದ ಭಟ್ಕಳ, ಮುರುಢೇಶ್ವರ, ಮಂಕಿ, ವಲ್ಕಿ, ಕುರ್ವಾ,ಹೊನ್ನಾವರ, ಸಂಶಿ, ಉಪ್ಪಾಣಿ, ಹೇರಾಂಗಡಿ, ಗೇರುಸೊಪ್ಪಾ, ಅಲ್ಲದೆ ಗಂಗೋಳಿ, ಶಿರೂರು,ಬೈಂದೂರು ಭಾಗದ 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಕೆನರಾ ಖಲೀಝ್ ಕೌನ್ಸಿಲ್ ಸರ್ವಾನುಮತದೊಂದಿಗೆ ನಿರ್ಣಯವನ್ನು ಕೈಗೊಂಡಿದ್ದು, ಇಡೀ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಆಡಳಿತ ಚುಕ್ಕಾಣಿ ಹಿಡಿಯಲಿದ್ದು ಇದನ್ನು ಪರಿಗಣಿಸುತ್ತ ಕೆನರಾ ಕೌನ್ಸಿಲ್ ಮಹಾಸಭೆಯೂ ಕೂಡ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ ಆದರೆ, ಅದಕ್ಕೂ ಪೂರ್ವ ಭಟ್ಕಳದ ತಂಝೀಮ್ ಸಂಸ್ಥೆಯು ಕಾಂಗ್ರೇಸ್ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿ ಮುಸ್ಲಿಮ ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಿ ಅವುಗಳನ್ನು ಪರಿಹರಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು, ಮಹಾಸಭೆಯಲ್ಲಿ ಎಲ್ಲ 29 ಜಮಾಅತ್ ಗಳ ಪ್ರತಿನಿಧಿಗಳು ಕಾಂಗ್ರೇಸ್ ಪಕ್ಷದ ಕೈಬಲಪಡಿಸುವ ಕುರಿತಂತೆ ಒಕ್ಕೋರಲಿನಿಂದ ನಿರ್ಣಯವನ್ನು ಕೈಗೊಂಡಿದ್ದು ಇದಕ್ಕಾಗಿ ಎಲ್ಲ ರೀತಿಯ ಸಹಾಯ ಸಹಕಾರ ಕೌನ್ಸಿಲ್ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೌನ್ಸಿಲ್ ನಿರ್ಣಯಗಳನ್ನು ಭಟ್ಕಳದ ತಂಝೀಮ್ ಸಂಸ್ಥೆಯು ಗೌರವಿಸುತ್ತದೆ ಮತ್ತು ನಮ್ಮ ನಿರ್ಣಯಗಳಿಗೆ ಅನುಗುಣವಾಗಿ ತನ್ನ ನಿರ್ಣಯವನ್ನು ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ ಬಾಷಾ, ಒಂದು ವೇಳೆ ತಂಝೀಮ್ ನಿಮ್ಮ ನಿರ್ಣಯಗಳನ್ನು ಒಪ್ಪಿಕೊಳ್ಳದೆ ಇದ್ದರೆ ಏನು ಮಾಡುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಂಝಿಮ್ ಕೌನ್ಸಿಲ್ ನ ನಿರ್ಣಯಗಳನ್ನು ಒಪ್ಪಿಕೊಳ್ಳದೆ ಇರಲು ಸಾಧ್ಯವಿಲ್ಲ ಏಕೆಂದರೆ ಕೆನರಾ ಖಲೀಝ್ ಕೌನ್ಸಿಲ್ ನಲ್ಲಿ ಭಟ್ಕಳ ಸೇರಿದಂತೆ ಶರಾವತಿ ನದಿ ತೀರದ ಪ್ರಮುಖ 29ಜಮಾಅತ್ ಗಳ ಪ್ರತಿನಿಧಿಗಳ ಒಕ್ಕೋರಲಿನ ನಿರ್ಣಯ ಇದಾಗಿದ್ದು ತಂಝೀಮ್ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸುತ್ತದೆ ಎಂದರು.
ಭಟ್ಕಳ ಮುಸ್ಲಿಮ್ ಸಮುದಾಯದ ಮುಖಂಡ ಎಸ್.ಎಂ.ಸೈಯ್ಯದ್ ಖಲೀಲುರ್ರಹ್ಮಾನ್ ಸಹ ಈ ಬಾರಿ ಎಲ್ಲ ಜಮಾಅತ್ ಪ್ರತಿನಿಧಿಗಳು ಕಾಂಗ್ರೇಸ್ ಪಕ್ಷದ ಬೆಂಬಲಕ್ಕೆ ನಿಂತಿವೆ. ಇಂತಹ ಸಂದರ್ಭದಲ್ಲಿ ತಂಝೀಮ್ ನಿರ್ಣಯವೂ ಕೂಡ ಇದಕ್ಕೆ ಹೊರತಾಗಿರುವುದಿಲ್ಲ ಎಂದ ಅವರು ಕಾಂಗ್ರೇಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಅಭ್ಯರ್ಥಿಯ ಘೋಷಣೆಯಾದ ಬಳಿಕ ತಂಝೀಮ್ ಕಾರ್ಯಾಲಯಕ್ಕೆ ಹೋಗಿ ಮುಖಂಡರೊಂದಿಗೆ ಚರ್ಚಿಸಲು ತಿಳಿಸುತ್ತೇನೆ ಎಂದರು.