ಶಿರಸಿ: ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದ 50ಸಾವಿರಕ್ಕೂ ಹೆಚ್ಚು ಮತದಾರರನ್ನು ಕುಳಿತಲ್ಲಿಂದಲೇ ಸಂಪರ್ಕಿಸಿ, ಮತ ಯಾಚಿಸಲು ಬಿಜೆಪಿ ವ್ಯವಸ್ಥಿತ ಕಾರ್ಯತಂತ್ರ ರೂಪಿಸಿದೆ. ಈಗಾಗಲೇ ಮತದಾರರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿರುವ ಪಕ್ಷ, ಕಾಲ್ ಸೆಂಟರ್ ಯುವಕರನ್ನು ಬಳಸಿಕೊಂಡು ಅವರ ಮನಗೆಲ್ಲುವ ಉತ್ಸಾಹದಲ್ಲಿದೆ.
ಒಂದೂವರೆ ವರ್ಷದ ಹಿಂದೆ ಮಿಸ್ಡ್ ಕಾಲ್ ಮೂಲಕ ಪಕ್ಷದ ಸದಸ್ಯತ್ವ ಪಡೆಯುವ ಅಭಿಯಾನವನ್ನು ಇಡೀ ದೇಶದಲ್ಲಿ ಬಿಜೆಪಿ ನಡೆಸಿತ್ತು. ಇದೇ ಅಭಿಯಾನ ಕರ್ನಾಟಕದಲ್ಲಿ ಸಹ ಯಶಸ್ವಿಯಾಗಿ ನಡೆದಿತ್ತು.
ಮಿಸ್ಡ್ ಕಾಲ್ ನೀಡಿ, ಬಿಜೆಪಿ ಸದಸ್ಯರಾದವರ ಬಳಿ ಅಂಚೆ ವಿಳಾಸವನ್ನು ಪಡೆದಿದ್ದ ಬಿಜೆಪಿ, ಪಿನ್ ಸಂಖ್ಯೆ ಆಧರಿಸಿ, ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತ್ವ ದಾಖಲಿಸಿರುವವರ ಯಾದಿಯನ್ನು ಸಿದ್ಧಪಡಿಸಿದೆ. ರಾಜ್ಯ ಘಟಕದಿಂದ ಜಿಲ್ಲೆಗೆ ಬಂದಿರುವ ಈ ಪಟ್ಟಿಯನ್ನು ಕ್ಷೇತ್ರವಾರು ಪ್ರತ್ಯೇಕಿಸಲಾಗಿದೆ. ಎರಡು ತಿಂಗಳುಗಳಿಂದ ಇದೇ ಕೆಲಸ ನಡೆಸಿರುವ ಕೆಲವು ಕಾರ್ಯಕರ್ತರು, ಚುನಾವಣೆಯ ಎದುರಿನಲ್ಲಿ ಆಯಾ ಕ್ಷೇತ್ರದ ಮಿಸ್ಡ್ ಕಾಲ್ ಸದಸ್ಯರ ಮೊಬೈಲ್ ಸಂಖ್ಯೆಗಳನ್ನು ಸಂಬಂಧಪಟ್ಟ ತಾಲ್ಲೂಕು ಕಾರ್ಯಾಲಯಗಳಿಗೆ ಕಳುಹಿಸಿದ್ದಾರೆ.
‘ಮಿಸ್ಡ್ ಕಾಲ್ ಸದಸ್ಯರು, ಕೇಂದ್ರ ಸರ್ಕಾರದ ಉಜ್ವಲ್, ಜನಧನ್, ಫಸಲ್ ಬಿಮಾ, ಇನ್ನಿತರ ಯೋಜನೆಗಳ ಫಲಾನುಭವಿಗಳು ಸೇರಿ 30ಸಾವಿರಕ್ಕೂ ಹೆಚ್ಚು ಜನರ ಮೊಬೈಲ್ ಸಂಖ್ಯೆ ಸಂಗ್ರಹಿಸಲಾಗಿದೆ.
ವಾಟ್ಸ್ಆ್ಯಪ್ ಗ್ರೂಪ್‌ಗಳ ಸದಸ್ಯರ ಸಂಖ್ಯೆ 8000 ಮಿಕ್ಕಿ ಇದೆ. ಇವರೆಲ್ಲರನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ಕೇಂದ್ರ ಸರ್ಕಾರದ ಸಾಧನೆ, ಬಿಜೆಪಿಯ ಮುಂದಿನ ಯೋಜನೆಗಳನ್ನು ತಿಳಿಸುತ್ತೇವೆ. ಕಾಲ್ ಸೆಂಟರ್ ಹುಡುಗರು ಮೊಬೈಲ್ ಸಂಖ್ಯೆ ಮುಂದಿಟ್ಟುಕೊಂಡು, ಪ್ರತಿಯೊಬ್ಬರಿಗೂ ಕರೆ ಮಾಡಲಿದ್ದಾರೆ. ಮೊಬೈಲ್ ಸಂಖ್ಯೆ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ’ ಎನ್ನುತ್ತಾರೆ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಡಿ.ಹೆಗಡೆ.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶಿರಸಿ ತಾಲ್ಲೂಕಿನ 22 ಗ್ರಾಮ ಪಂಚಾಯ್ತಿಗಳ ಶಕ್ತಿ ಕೇಂದ್ರಗಳು, ನಗರ ವ್ಯಾಪ್ತಿ ಎಲ್ಲ 31 ವಾರ್ಡ್‌ಗಳು, ಅಲ್ಲಿನ ಶಕ್ತಿ ಕೇಂದ್ರ, ನಗರ ಮಂಡಳ, ಸಿದ್ದಾಪುರ ತಾಲ್ಲೂಕಿನ 23 ಗ್ರಾಮ ಪಂಚಾಯ್ತಿಗಳ ಶಕ್ತಿಕೇಂದ್ರಗಳು, ಪಟ್ಟಣ ವ್ಯಾಪ್ತಿ ಮೂರು ಶಕ್ತಿ ಕೇಂದ್ರಗಳಿಂದ 100ಕ್ಕೂ ಹೆಚ್ಚು ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಲಾಗಿದೆ ಎನ್ನುತ್ತಾರೆ ಬಿಜೆಪಿ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್.
ವಾನಳ್ಳಿ, ದೇವನಳ್ಳಿಯಂತಹ ದೂರದ ಹಳ್ಳಿಗಳಲ್ಲಿ ಸಹ ಗ್ರೂಪ್ ರಚಿಸಲಾಗಿದೆ. ಒಂದೊಂದು ಗ್ರೂಪ್‌ನಲ್ಲಿ ಕನಿಷ್ಠ 50ರಿಂದ ಗರಿಷ್ಠ 150 ಸದಸ್ಯರು ಇದ್ದಾರೆ. ಶಕ್ತಿ ಕೇಂದ್ರದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳ ಜೊತೆಗೆ, ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಈ ಗ್ರೂಪ್‌ನಲ್ಲಿದ್ದಾರೆ. ಸ್ಮಾರ್ಟ್ ಫೋನ್ ಇಲ್ಲದ ಅನೇಕ ಕಾರ್ಯಕರ್ತರು ಇದ್ದಾರೆ. ಅಂತಹವರಿಗೆ ಸಹ ಕಾರ್ಯಕರ್ತರು ಮಾಹಿತಿ ತಲುಪಿಸುತ್ತಾರೆ. ಆಯಾ ಶಕ್ತಿ ಕೇಂದ್ರಕ್ಕೆ ಸಂಬಂಧಿಸಿದ ವ್ಯಕ್ತಿಯೇ ಎಡ್ಮಿನ್ ಆಗಿ ಕಾರ್ಯನಿರ್ವಹಿಸುತ್ತಾರೆ. ಪಕ್ಷದ ಕಾರ್ಯಕ್ರಮಗಳು, ಮುಂದಿನ ಯೋಜನೆಗಳನ್ನು ಕ್ಷಣಾರ್ಧದಲ್ಲಿ ಎಲ್ಲರಿಗೂ ತಿಳಿಸುವ ಉದ್ದೇಶ ಈ ಗ್ರೂಪ್‌ಗಳದ್ದಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.