ಚೆನ್ನೈ,- ಅನಾರೋಗ್ಯದಿಂದ ಬಳಲುತ್ತಿದ್ದ ಬಹುಭಾಷಾ ನಿರ್ದೇಶಕ ಸಿ.ವಿ.ರಾಜೇಂದ್ರನ್(81) ಅವರು ಇಂದು ತಮ್ಮ ನಿವಾಸದಲ್ಲಿ ವಿಧಿವಶರಾದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳ ಚಿತ್ರವನ್ನ್ನು ನಿರ್ದೇಶಿಸಿದ್ದ ರಾಜೇಂದ್ರನ್ ಆಗಿನ ಕಾಲದ ಸ್ಟಾರ್ ನಟರುಗಳಾದ ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಶಂಕರ್‍ನಾಗ್, ಚಿರಂಜೀವಿ, ಶಿವಾಜಿಗಣೇಶನ್, ಜೈಶಂಕರ್, ರಜನಿಕಾಂತ್, ಕಮಲ್‍ಹಾಸನ್‍ರಂತಹ ಸ್ಟಾರ್ ನಟರುಗಳ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತಮಿಳು ಚಿತ್ರರಂಗದಲ್ಲಿ ಇವರು ಆರಂಭದಲ್ಲಿ ಅವರ ಸಹೋದರ ಖ್ಯಾತ ನಿರ್ದೇಶಕ ಸಿ.ವಿ.ಶ್ರೀಧರ್‍ರ ಗರಡಿಯಲ್ಲಿ ಕೆಲಸ ಮಾಡಿ, ದಿಲ್ ಕ ಮಂದಿರ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ನಿಜಂ ಮರಪಟ್ಟೈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಜೇಂದ್ರನ್ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ನಟಿಸಿದ್ದ ಗಲಾಟಾ ಕಲ್ಯಾಣಂ, ರಾಜಾ, ನಿಧಿ, ಸುಮನ್ ಇನ್ ಸುಂದರಿ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು.
ವರನಟ ಡಾ.ರಾಜ್‍ಕುಮಾರ್ ನಟಿಸಿದ್ದ ತ್ರಿಮೂರ್ತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ರಾಜೇಂದ್ರನ್ ನಂತರ ಕಿಟ್ಟುಪುಟ್ಟು, ಗಲಾಟೆಸಂಸಾರ, ಅದಲು ಬದಲು, ಉಷಾ ಸ್ವಯಂವರ, ಘರ್ಜನೆ, ಸಿಂಗಾಪುರದಲ್ಲಿ ರಾಜಾ ಕುಳ್ಳ, ಪ್ರೀತಿಮಾಡು ತಮಾಷೆ ನೋಡು ಮುಂತಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದರು.
ತಮಿಳು ಚಿತ್ರರಂಗದ ಖ್ಯಾತ ನಟ ಶಿವಾಜಿ ಪ್ರಭುರವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಸಿ.ವಿ.ರಾಜೇಂದ್ರನ್ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ಮಿಸಿ, ನಟಿಸಿದ್ದ ಪ್ರೇಮಮತ್ಸರ ಚಿತ್ರವನ್ನು ನಿರ್ದೇಶಿಸಿದ್ದರು. ಇವರ ನಿರ್ದೇಶನದ ರಾಜಾ, ಎನ್ ಮಗನ್, ತ್ರಿಮೂರ್ತಿ, ದುಲ್ಲನ್, ಘರ್ಜನಂ, ಚಿರಂಜೀವಿ, ಉಲ್ಲಾಸ ಪರವಾಂಗಲ್ ಚಿತ್ರಗಳು ಚಿತ್ರರಂಗದಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇತ್ತೀಚೆಗೆ ರಾಜೇಂದ್ರನ್ ತಮ್ಮ ನಿರ್ದೇಶನದ 50 ವರ್ಷಗಳನ್ನು ಪೂರೈಸಿದಾಗ ನಟ ಶಿವಾಜಿಪ್ರಭು, ನಿರ್ದೇಶಕ ಚಿರುತಾಲಾ ಗೋಪು, ಕಂಚಾನಾ, ನಿರ್ಮಲಾ ಅವರು ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು.