ಕೆಲ ದಿನಗಳ ಹಿಂದಷ್ಟೇ ಗೋ ಶಾಲೆಗೆ ನುಗ್ಗಿ ತಲವಾರು ತೋರಿಸಿ ಗೋವುಗಳನ್ನ ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋ ಪ್ರೇಮಿಯೊಬ್ಬರು ಮಂಗಳೂರಿನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗೋವು ಕಳ್ಳರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪುಣ್ಯ ಕೋಟಿ ನಗರದ ಅಮೃತಾ ಧಾರಾ ಗೋ ಶಾಲೆಯಿಂದ ದನಗಳನ್ನು ಕದ್ದು ಕೊಂಡು ಹೋಗಲಾಗಿದೆ.
ಈ ಕೃತ್ಯವನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಅಮೃತ ಧಾರಾ ಗೋ ಶಾಲೆ ಅಧ್ಯಕ್ಷ ರಾಜಾರಾಮ್ ಭಟ್ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ನಿನ್ನೆ ಬೆಳಿಗ್ಗೆಯಿಂದ ಆರಂಭವಾದ ಉಪವಾಸ ಆಹೋರಾತ್ರಿ ಮುಂದುವರೆದಿದ್ದು, ಪೊಲೀಸ್ ಇಲಾಖೆಯ ಮನವೊಲಿಕೆಯೂ ವಿಫಲವಾಗಿದೆ. ಕಳೆದ 6 ತಿಂಗಳಿನಲ್ಲಿ 30 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ . ಆದರೂ ಗೋ ಕಳವು ಪ್ರಕರಣಗಳು ನಡೆಯುತ್ತಲೇ ಇದೆ.
ಅಮೃತ ಧಾರಾ ಗೋ ಶಾಲೆ ಯಿಂದ 2 ದನಗಳನ್ನು ಕದ್ದು ಕೊಂಡು ಹೋಗಿದ್ದಾರೆ. ಕೈಯಲ್ಲಿ ತಲವಾರು ಹಿಡಿದು ಕೊಂಡು ಬಂದ ಕಳ್ಳರು ದನ ಕಟ್ಟಿ ಹಾಕಿದ ಹಗ್ಗವನ್ನು ತಲವಾರು ನಿಂದ ಕಡಿದು ರಿಟ್ಜ್ ಕಾರ್ ನಲ್ಲಿ ದನವನ್ನು ಕೊಂಡು ಹೋಗಿದ್ದಾರೆ. ದನವನ್ನು ರಕ್ಷಣೆ ಮಾಡಲು ಹೋದವರಿಗೆ ಜೀವ ಬೆದರಿಕೆ ಕೂಡ ಹಾಕಲಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಹಾಗೂ ಸರಕಾರ ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು ಹಾಗೂ ಗೋ ಶಾಲೆಗೆ ರಕ್ಷಣೆ ಕೊಡಬೇಕು. ಆರೋಪಿಗಳ ಬಂಧನವಾಗದೇ ಇದ್ದಲ್ಲಿ ಉಪವಾಸ ಮುಂದುವರೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.
ಒಬ್ಬರಿಂದ ಶುರುವಾದ ಉಪವಾಸ ಸತ್ಯಾಗ್ರಹಕ್ಕೆ ಈಗ ಹಲವಾರು ಗೋಪ್ರೇಮಿಗಳು ಕೈ ಜೋಡಿಸಿದ್ದಾರೆ.