ಯಲ್ಲಾಪುರ: ತಾಲ್ಲೂಕಿನ ಮಾಗೋಡ ಜಲಪಾತ ನೀರಿಲ್ಲದೇ ಸೊರಗಿದೆ. ಜಲಪಾತದಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದು, ಇಲ್ಲಿಗೆ ಪ್ರವಾಸಿಗರಿಗೆ ನಿರಾಸೆಯುಂಟಾಗಿದೆ.ಒಂದು ತಿಂಗಳಿನಿಂದ ನೀರಿನ ಪ್ರಮಾಣ ಕಡಿಮೆಯಾಗುತ್ತ ಬಂದಿದೆ. ಒಂದು ವಾರದಿಂದ ಸಂಪೂರ್ಣ ನೀರಿಲ್ಲದಂತಾಗಿದೆ. ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ದೂರದ ಊರುಗಳಿಂದ ಬರುವ ಪ್ರವಾಸಿಗರು ಬೇಸರಗೊಂಡು ಮರಳಿ ಹೋಗುತ್ತಿದ್ದಾರೆ.
‘ಬೇಡ್ತಿ ನದಿಯ ಮಾಗೋಡ ಜಲಪಾತದ ನೀರು ಪ್ರತಿ ವರ್ಷ ಬೇಸಿಗೆಯಲ್ಲಿ ಬಿಸಿಲಿನ ತೀವ್ರತೆಗೆ ಬತ್ತಿ ಹೋಗುವುದೇನೂ ವಿಶೇಷವಲ್ಲ. ಪ್ರತಿ ಬಾರಿ ಏಪ್ರಿಲ್ ತಿಂಗಳ ಕೊನೆಯಲ್ಲಿ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಬೇಸಿಗೆಯ ತೀವ್ರತೆಗೆ ಒಂದು ತಿಂಗಳು ಮುಂಚಿತವಾಗಿ ನೀರಿಲ್ಲವಾಗಿದೆ’ ಎಂದು ಸ್ಥಳೀಯರಾದ ವಿಶ್ವನಾಥ ಅವರು ಹೇಳಿದರು.
‘ಮೊದಲೇ ಮಾಗೋಡ ಜಲಪಾತದ ರಸ್ತೆಯ ದುರವಸ್ಥೆ ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿದೆ. ದುಸ್ತರವಾದ ರಸ್ತೆಯಲ್ಲಿ ದೂರದಿಂದ ಆಗಮಿಸಿಯೂ ಜಲಪಾತದಲ್ಲಿ ನೀರಿಲ್ಲದೇ ಇರುವುದು ಪ್ರವಾಸಿಗರಿಗೆ ಮತ್ತಷ್ಟು ಬೇಸರ ಉಂಟಾಗುವಂತಾಗಿದೆ.ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಜಾ ದಿನಗಳು ಇರುವುದರಿಂದ ಪ್ರವಾಸಿಗರ ಸಂಖ್ಯೆ ಸಹಜವಾಗಿ ಹೆಚ್ಚುತ್ತಿತ್ತು. ಈಗ ನೀರಿಲ್ಲದ ಕಾರಣ, ಒಂದು ವಾರದಿಂದ ಪ್ರವಾಸಿಗರ ಸಂಖ್ಯೆ ತೀವ್ರ ಇಳಿಮುಖವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.