ಸಿದ್ದಾಪುರ: ತಂದೆ-ತಾಯಿ-ಗುರುವಿಗೆ ನೀಡುವ ಪೂಜೆಯ ಮುಂದೆ ಯಾವ ದೇವ ಪೂಜೆಯೂ ಇಲ್ಲ. ಅದೇ ಮೂರು ಲೋಕ, ಅದೇ ಸರ್ವಸ್ವ, ಅದೇ ಸರ್ವ ಪ್ರಪಂಚ. ಕಾಶಿಯ ಗಂಗೆ ಪವಿತ್ರವಾದರೂ ತಂದೆ-ತಾಯಿ-ಗುರುವಿನಷ್ಟು ಪವಿತ್ರವಲ್ಲ ಎಂದು ಶ್ರೀರಾಮನು ಪ್ರತಿಪಾದಿಸಿದ್ದು. ಜನ್ಮ ನೀಡಿದ ತಂದೆತಾಯಿಯರ ಋಣ ತೀರಿಸಲಾಗದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಶ್ರೀಗಳು ಹೇಳಿದರು.
ತಾಲೂಕಿನ ಬಾಳೇಸರದ ಮಹಾಲಕ್ಷ್ಮೀಯಲ್ಲಿ ಆಯೋಜಿಸಲಾಗಿದ್ದ ಸಾಧಕರಿಗೆ ಸನ್ಮಾನ, ಸಂಸ್ಮರಣ ಸಂಚಿಕೆ ಅನಾವರಣ, ಯಕ್ಷೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಶ್ರೀಗಳು ಮಂಗಳವಾರ ಆಶೀರ್ವಚನ ನೀಡಿದರು.ಯಜ್ಞಕ್ಕಿಂತ ಹೆಚ್ಚಿನ ಫಲ ತಂದೆ,ತಾಯಿ,ಗುರುವಿನ ಸೇವೆಯಿಂದ ಲಭಿಸುತ್ತದೆ. ಜನ್ಮ ನೀಡಿದ ತಂದೆತಾಯಿಯರ ಋಣ ತೀರಿಸಲಾಗದು. ನಾವು ಹಿರಿಯರನ್ನು ಮರೆಯಬಾರದು, ಮರೆತಲ್ಲಿ ಕೃತಘ್ನರಾಗುತ್ತೇವೆ. ಯಕ್ಷಗಾನ ನಮ್ಮ ಕಲೆ. ಇದು ವಿಸ್ತಾರಗೊಳ್ಳಬೇಕು. ಪ್ರತಿ ಮನೆಯಲ್ಲಿ ಯಕ್ಷಗಾನದ ಅಭಿರುಚಿ ಇರಬೇಕು ಎಂದು ಶ್ರೀಗಳು ಹೇಳಿದರು.
ಸಾಹಿತಿ ವಿಶ್ವೇಶ್ವರ ಹೆಗಡೆ ಅತ್ತೀಮುರುಡು, ಆರ್.ಎಸ್.ಹೆಗಡೆ ಹರಗಿ, ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಯಕ್ಷಗಾನ ಕಲಾವಿದರಾದ ಕೃಷ್ಣ ಯಾಜಿ ಬಳ್ಕೂರ, ರಾಮಚಂದ್ರ ಹೆಗಡೆ ಕೊಂಡದಕುಳಿ, ಗಣಪತಿ ಹೆಗಡೆ ತೋಟಿಮನೆ, ಸಾಹಿತಿ ಶಾ.ಮಂ.ಕೃಷ್ಣರಾವ್, ಡಾ.ಟಿ.ವಿ.ಭಟ್ಟ ಉಂಚಳ್ಳಿ, ವಿ.ಜಗದೀಶ ಶರ್ಮಾ, ಡಾ.ವೈ.ವಿ.ಕೃಷ್ಣಮೂರ್ತಿ, ವಿದ್ವಾಂಸ ದೇವರು ಹೆಗಡೆ ಕಲಗಾರ, ವೇ.ಕೋಡಿಗದ್ದೆ ರಾಮಚಂದ್ರ ಭಟ್ಟ, ಎಂ.ಆರ್.ಹೆಗಡೆ ನೇಗಾರ, ವೇ.ಕೃಷ್ಣ ಭಟ್ಟ ಅಡವಿತೋಟ, ಎನ್.ಎಸ್.ಭಟ್ಟ ಗುಡ್ಡೇಕೊಪ್ಪ ಇತರರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಶ್ರೀಗಳು ಸನ್ಮಾನಿಸಿದರು ಹಾಗೂ ಸಂಸ್ಮರಣ ಗ್ರಂಥ ನೆನಪಿನಂಗಳ ಮತ್ತು ಮಹಾದೇವಿ ಗಣೇಶ ಭಟ್ಟ ಕೋಡಿಗದ್ದೆ ಅವರ ರಚನೆಯ ಸಂಪ್ರದಾಯಿಕ ಹಾಡುಗಳ ಸಂಗ್ರಹ ಶ್ರೀಗಂಧ ಲೋಕಾರ್ಪಣೆ ಮಾಡಿದರು.