ಕಾರವಾರ: ವಿಧಾನಸಭೆ ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದ್ದು, ಜಿಲ್ಲೆಯಲ್ಲಿ ಚುನಾವಣಾ ಅಕ್ರಮ ತಡೆಯಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ. ಇದರ ಅಂಗವಾಗಿ ಆಯಕಟ್ಟಿನ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ
ಪ್ರಗತಿಯಲ್ಲಿದೆ. ಹೀಗಾಗಿ ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳಿಗೆ ತಡೆ ಬೀಳಲಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್‌.ಎಸ್.ನಕುಲ್, ‘ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ 3–4ರಂತೆ ಒಟ್ಟು 30 ಚೆಕ್‌‍‍ಪೋಸ್ಟ್‌ಗಳನ್ನು ಆರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ 10 ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗುತ್ತಿದೆ. ಇನ್ನು ಮೂರು–ನಾಲ್ಕು ದಿನಗಳಲ್ಲಿ ಈಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ಈ ಎಲ್ಲ ಕೇಂದ್ರಗಳ ನೇರ ದೃಶ್ಯಾವಳಿಗಳು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗಳಲ್ಲಿರುವ ಪರದೆಗಳಲ್ಲಿ ಕಾಣಿಸಲಿವೆ. ಇದರಿಂದ ಅಧಿಕಾರಿಗಳಿಗೆ ತಮ್ಮ ಕಚೇರಿಯ ಕೆಲಸದ ನಡುವೆಯೂ ಚೆಕ್‌ಪೋಸ್ಟ್‌ಗಳಲ್ಲಿ ಆಗುತ್ತಿರುವ ವಿದ್ಯಮಾನಗಳ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ. ಗೋವಾ ಗಡಿಯಲ್ಲಿರುವ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಈಗಾಗಲೇ ಕಂದಾಯ ಇಲಾಖೆಯಿಂದ ಕೂಡ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅದೇ ರೀತಿ,360 ಡಿಗ್ರಿ ಕೋನದ ದೊಡ್ಡ ಹಾಗೂ ಹೆಚ್ಚಿನ ಸಾಮರ್ಥ್ಯದ ಕ್ಯಾಮೆರಾವೊಂದರ ಅಳವಡಿಕೆ ಕಾರ್ಯವೂ ಪ್ರಗತಿಯಲ್ಲಿದೆ. ಇಲ್ಲಿ ಮದ್ಯದ ಅಕ್ರಮ ಸಾಗಣೆ, ಮಾರಕಾಸ್ತ್ರಗಳ ಸಾಗಣೆ, ದಾಖಲೆ ಇಲ್ಲದೇ ನಗದು, ಚಿನ್ನಾಭರಣ ತೆಗೆದುಕೊಂಡು ಹೋಗುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಸಂಶಯಾಸ್ಪದವಾಗಿ ಸಂಚರಿಸುತ್ತಿರುವ ಯಾವುದೇ ವಾಹನ ಕಂಡುಬಂದರೂ ತಡೆದು ನಿಲ್ಲಿಸಿ ತಪಾಸಣೆ ನಡೆಸಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಚೆಕ್‌ಪೋಸ್ಟ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

RELATED ARTICLES  ಇಂದಿನ(ದಿ-29/10/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಚೆಕ್‌ಪೋಸ್ಟ್‌ಗಳಲ್ಲಿ ಅಬಕಾರಿ ಇಲಾಖೆ ಉಪ ಆಯುಕ್ತ ಎಲ್.ಎನ್.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ದೈನಂದಿನ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಅವರ ಜತೆ ಹೆಚ್ಚುವರಿಯಾಗಿ ಗೃಹರಕ್ಷಕ ದಳ, ಅರಣ್ಯ ಇಲಾಖೆ ಸಿಬ್ಬಂದಿ, ವಿಚಕ್ಷಣಾ ದಳದ ಮುಖ್ಯಸ್ಥ ರಾಜೇಂದ್ರ ಬೇಕಲ್ ಅವರ ನೇತೃತ್ವದ ತಂಡದ ಸದಸ್ಯರೂ ಕೂಡಿಕೊಂಡಿದ್ದಾರೆ. ಎಲ್ಲ ವಾಹನಗಳನ್ನೂ ತಡೆದು ಸಮಗ್ರವಾಗಿ ಜಾಲಾಡಲಾಗುತ್ತಿದೆ. ಮೂರು ಪಾಳಿಗಳಲ್ಲಿ ದಿನದ 24 ಗಂಟೆಯೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

RELATED ARTICLES  ಶಿರಸಿಯಲ್ಲಿ ಗುಂಡಿಗೆ ಬಿತ್ತು ಇಂಗುಗುಂಡಿ ಕಾಮಗಾರಿ: ಜನತೆಯಿಂದ ಹೊರಬಿತ್ತು ಅವ್ಯವಹಾರದ ಶಂಕೆ.