ಶಿರಸಿ: ‘ಸಂವಿಧಾನ ಉಳಿವಿಗಾಗಿ ಕರ್ನಾಟಕ ಆಂದೋಲನ’ಕ್ಕೆ ತಮಟೆ ಬಾರಿಸುವ ಮೂಲಕ ಗುಜರಾತಿನ ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅವರು ಚಾಲನೆ ನೀಡಿದರು. ಶಿರಸಿಯಿಂದ ಆರಂಭವಾಗಲಿರುವ ಈ ಅಭಿಯಾನ ರಾಜ್ಯದಾದ್ಯಂತ ನಡೆಯಲಿದೆ.
‘ಇಲ್ಲಿನ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುವ ಮಾತನಾಡಿದ್ದರು. ಅದಕ್ಕಾಗಿ ಇಲ್ಲಿಂದಲೇ ಆಂದೋಲನ ಅರಂಭಿಸುತ್ತಿದ್ದೇವೆ’ ಎಂದು ಸಂಘಟನೆ ಮುಖಂಡ ಕೆ.ರಮೇಶ್ ತಿಳಿಸಿದರು.
‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ನಾವು ಪ್ರೀತಿಸುತ್ತೇವೆ. ಸಂವಿಧಾನ ವಿರೋಧಿ ಹೇಳಿಕೆ ನೀಡಿ, ನಮ್ಮನ್ನು ಎಚ್ಚರಿಸಿರುವ ಅವರು, ನಮ್ಮಲ್ಲಿ ಒಗ್ಗಟ್ಟು ಮೂಡಿಸಲು ಕಾರಣರಾಗಿದ್ದಾರೆ. ಬೀಸುವ ಲಾಠಿಗೆ ತಿರುಗಿ ಲಾಠಿ ಬೀಸಿ ನಮ್ಮನ್ನು ರಕ್ಷಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಸಾಹಿತಿ ಬಿ.ಟಿ.ಲಲಿತಾ ನಾಯಕ ಹೇಳಿದರು.
‘ಸಂವಿಧಾನ ವಿರೋಧಿ ಹೇಳಿಕೆ ನೀಡಿದರೆ, ಇಂತಹ ಮಾತನ್ನು ಆಡಬೇಡಯ್ಯ ಎಂದು ಗಟ್ಟಿ ದನಿಯಲ್ಲಿ ನಾವು ಹೇಳಬೇಕಾಗಿದೆ. ಈ ದೇಶಕ್ಕೆ ಗಾಂಧಿಯ ಶಾಂತಿ, ಬುದ್ಧ, ಬಸವಣ್ಣನ ಕರುಣೆ ಬೇಕಾಗಿದೆ. ಬದಲಾಗಿ ಜಾತಿಗಳ ನಡುವೆ ಒಡಕು ಮೂಡಿಸುವುದಿಲ್ಲ. ರಕ್ತ ಮನುಷ್ಯನ ದೇಹದಲ್ಲಿ ಹರಿಯಬೇಕೇ ವಿನಾ ನೆಲಕ್ಕೆ ಹರಿಯುವುದಲ್ಲ. ಇದನ್ನು ನಾವು ಸಮಾಜಕ್ಕೆ ತಿಳಿಸಬೇಕಾಗಿದೆ’ ಎಂದರು.