ನವದೆಹಲಿ: ಬ್ರಿಟನ್‌ನ ಕೇಂಬ್ರಿಜ್‌ ಅನಲಿಟಿಕಾ (ಸಿ.ಎ.) ಕಂಪನಿಯು ಫೇಸ್‌ಬುಕ್‌ ಖಾತೆಗಳ ಮೂಲಕ ಮಾಡಿದ ಮಾಹಿತಿ ಕಳವಿನಿಂದಾಗಿ ಭಾರತದಲ್ಲಿ 5.62 ಲಕ್ಷ ಜನರಿಗೆ ತೊಂದರೆ ಆಗಿರಬಹುದು ಎಂದು ಫೇಸ್‌ಬುಕ್‌ ಕಂಪನಿ ಹೇಳಿದೆ.

ಕೇಂಬ್ರಿಜ್‌ ಅನಲಿಟಿಕಾ ಕಂಪನಿಯ ಮಾಹಿತಿ ಕಳವು ಪ್ರಕರಣ ಬಹಿರಂಗವಾದ ಬಳಿಕ ಈ ಕಂಪನಿ ಮತ್ತು ಫೇಸ್‌ಬುಕ್‌ಗೆ ಭಾರತ ಸರ್ಕಾರವು ನೋಟಿಸ್‌ ನೀಡಿತ್ತು.

ವಿವಿಧ ದೇಶಗಳ ಚುನಾವಣೆ ಮೇಲೆ ಪ್ರಭಾವ ಬೀರುವುದಕ್ಕಾಗಿ ಫೇಸ್‌ಬುಕ್‌ನ ಲಕ್ಷಾಂತರ ಬಳಕೆದಾರರ ವೈಯಕ್ತಿಕ ಮಾಹಿತಿ
ಯನ್ನು ಸಿ.ಎ. ಬಳಸಿಕೊಂಡಿತ್ತು. ಕೇಂಬ್ರಿಜ್‌ ಅನಲಿಟಿಕಾ ಕಂಪನಿಯು 8.7 ಕೋಟಿ ಜನರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಹಂಚಿಕೊಂಡಿದೆ ಎಂದು ಫೇಸ್‌ಬುಕ್‌ ಒಪ್ಪಿಕೊಂಡಿದೆ. ಇವರಲ್ಲಿ ಹೆಚ್ಚಿನವರು ಅಮೆರಿಕನ್ನರು.

RELATED ARTICLES  ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್

‘ಮೈಡಿಜಿಟಲ್‌ಲೈಫ್‌’ ಎಂಬ ಆ್ಯಪ್‌ ಅಳವಡಿಸಿಕೊಂಡ 335 ಬಳಕೆದಾರರ ಮಾಹಿತಿಯನ್ನು ಅನಲಿಟಿಕಾ ಕಂಪನಿಯು ನೇರವಾಗಿ ಬಳಸಿಕೊಂಡಿದೆ. ಈ 335 ಜನರ ಜತೆ ಫೇಸ್‌ಬುಕ್‌ ಮೂಲಕ ಸಂಪರ್ಕದಲ್ಲಿದ್ದ 5.62 ಲಕ್ಷ ಜನರ ಮಾಹಿತಿಯನ್ನೂ ಅನಲಿಟಿಕಾ ಕಂಪನಿಯು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಫೇಸ್‌ಬುಕ್‌ ಅಂದಾಜಿಸಿದೆ.

ಜಗತ್ತಿನಾದ್ಯಂತ ಮತ್ತು ಭಾರತದಲ್ಲಿ ತೊಂದರೆಯಾದ ಜನರ ನಿಖರ ಸಂಖ್ಯೆ ಎಷ್ಟು ಎಂಬುದನ್ನು ಕಂಡುಕೊಳ್ಳಲು
ಪ್ರಯತ್ನ ನಡೆಯುತ್ತಿದೆ ಎಂದು ಫೇಸ್‌ಬುಕ್‌ ವಕ್ತಾರರು ತಿಳಿಸಿದ್ದಾರೆ.

RELATED ARTICLES  ನವೆಂಬರ್ 10 ರಂದು ಕುಮಟಾದ ವಿವೇಕ ನಗರದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಮಾಹಿತಿ ಕಳವಿಗೆ ಸಂಬಂಧಿಸಿ ಜಗತ್ತಿನ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದರಿಂದಾಗಿ ಫೇಸ್‌ಬುಕ್‌ ಕಂಪನಿಯು ಬಳಕೆದಾರರ ಕ್ಷಮೆ ಕೋರಿದೆ. ಭಾರತದಲ್ಲಿಯೂ ಈ ಪ್ರಕರಣ ಸಂಚಲನ ಮೂಡಿಸಿದೆ.

ಮಾಹಿತಿ ಕಳವಿನ ಮೂಲಕ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ಫೇಸ್‌ಬುಕ್‌ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್‌ ಜುಕರ್‌ಬರ್ಗ್‌ ಅವರನ್ನೇ ವಿಚಾರಣೆಗೆ ಕರೆಸಿಕೊಳ್ಳಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ಕಳೆದ ತಿಂಗಳು ಎಚ್ಚರಿಕೆ ನೀಡಿದ್ದರು.