ಕೈರಂಗಳದಲ್ಲಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಶ್ರೀ ಶ್ರೀ ರಾಘವೇಶ್ವರ ಶ್ರೀಗಳು ಭೇಟಿ ನೀಡಿದರು.
ಗೋಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ “ಎಲ್ಲದಕ್ಕೂ ಮಿತಿಯಿರಬೇಕು; ಯಾವುದೂ ಅತಿಯಾಗಬಾರದು. ಆದರೆ ಗೋಚೌರ್ಯದ ಕ್ರೌರ್ಯ ‘ಅತಿ’ಯ ಮಿತಿಯನ್ನೂ ಮೀರಿದೆ. ಮತಿಯಿಲ್ಲದ ಸರಕಾರಕ್ಕೆ ಬೇಕಾದುದು ಮತವೊಂದೇ” ಎಂದು ನುಡಿದರು.
ಉಪವಾಸವನ್ನು ಮುಂದುವರಿಸುವಂತೆ ಗೋಪ್ರೇಮಿಗಳನ್ನು ಬೆಂಬಲಿಸಿದರು. ನೀವು ಉಪವಾಸವನ್ನು ಮುಂದುವರಿಸಲು ಅಶಕ್ತರಾದರೆ, ನಂತರ ನಾವು ಅದನ್ನು ಮುಂದುವರಿಸುವೆವು ಎನ್ನುವ ಅಮೃತದ ವಚನವನ್ನು ನುಡಿದರು.
ಕನ್ಯಾನದ ಬಾಳೆಕೋಡಿ ಶ್ರೀ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಸಭೆಯಲ್ಲಿ ಉಪಸ್ಥಿತರಿದ್ದರು.
ಡಾ| ಕಲ್ಲಡ್ಕ ಪ್ರಭಾಕರ ಭಟ್ಟರು ಮಾತನಾಡಿ ನಮ್ಮದು ನ್ಯಾಯ, ನೀತಿಗಳಿಲ್ಲದ ಸರಕಾರ. ಮತದಾನದ ದಿನ ಹತ್ತಿರ ಬರುತ್ತಿದೆ. ಇಂಥವರಿಗೆ ಯಾರೂ ಮತದಾನ ಮಾಡಬಾರದು. ನಿಮ್ಮ ಮತ ನ್ಯಾಯದಲ್ಲಿ ನಡೆಯುವವರ ಕಡೆಗೆ ಇರಲಿ ಎಂದು ನುಡಿದರು.
ರಾಜಾರಾಮ ಭಟ್ಟರು ಗೋ ಕಳ್ಳತನದ ಬಗ್ಗೆ ವಿವರಿಸಿದರು.
ಶ್ರೀಗಳು ಗೋವನ್ನು ರಕ್ಷಿಸಿದ ವಿಶ್ವನಾಥ ಕಡ್ವಾಯಿ ಮತ್ತು ದೇವರಾಜ್ ಅವರಿಗೆ ಚಿನ್ನದ ರಾಮಠಂಕೆಯನ್ನು ನೀಡಿ ಅನುಗ್ರಹಿಸಿದರು.