ಭಟ್ಕಳ: ಹೆಚ್ಚುವರಿ ಆಧಾರ್ ಕೇಂದ್ರ ತೆರೆಯುವಂತೆ ಆಗ್ರಹಿಸಿ ಭಟ್ಕಳದಲ್ಲಿ ತಂಝೀಮ್ ಸಂಸ್ಥೆಯ ವತಿಯಿಂದ ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಲಾಯಿತು.
‘ಪಟ್ಟಣದಲ್ಲಿ ಈಗ 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಎಲ್ಲರೂ ಒಂದೇ ಆಧಾರ್ ಕೇಂದ್ರದ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮೀಣ ಭಾಗದಿಂದಲೂ ಜನರು ಬರುತ್ತಿರುವುದರಿಂದ ಕೇಂದ್ರದಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ಬೆಳಿಗ್ಗೆಯಿಂದ ನೂರಾರು ಜನರು ಬಿಸಿಲಿನಲ್ಲಿ ಸರತಿಯಲ್ಲಿ ನಿಂತುಕೊಂಡು ಹೈರಾಣಾಗುತ್ತಿದ್ದಾರೆ. ಪ್ರತಿ ದಿನ 40 ಜನರ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತಿದೆ’ ಎಂದು ದೂರಿದರು.
‘ಆಧಾರ್ ಕಾರ್ಡ್‌ನಲ್ಲಿ ತಪ್ಪಾಗಿರುವ ಹೆಸರು, ವಿಳಾಸ, ಜನ್ಮದಿನಾಂಕ ಸರಿಪಡಿಸಲು ಗೆಜೆಟೆಡ್ ಅಧಿಕಾರಿಗಳ ಸಹಿ ಬೇಕಾಗಿರುವುದರಿಂದ ಪ್ರತಿದಿನ ಜನರು ಕಚೇರಿಗಳಿಗೆ ಅಲೆದಾಡುವಂತಾಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹೆಚ್ಚುವರಿ ಆಧಾರ್ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ತಂಝೀಮ್ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ, ಎಸ್. ಎಂ ಪರ್ವೇಜ್, ಅಶ್ಪಾಕ್ ಕೆ. ಎಂ, ಮೌಲಾನಾ ಯಾಸೀರ್ ನದ್ವಿ ಮುಂತಾದವರು ಹಾಜರಿದ್ದರು.