ಗೋಲ್ಡ್ ಕೋಸ್ಟ್, ಆಸ್ಟ್ರೇಲಿಯಾ: ತೊಡೆಯಲ್ಲಿ ವಿಪರೀತ ನೋವು ಇದ್ದರೂ ಲೆಕ್ಕಿಸದ ಭಾರತದ ಸತೀಶ್ ಕುಮಾರ್ ಶಿವಲಿಂಗಂ ಚಿನ್ನ ಗಳಿಸಿ ಸಂಭ್ರಮಿಸಿದರು. ಶನಿವಾರ ನಡೆದ ಪುರುಷರ 77 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಸತೀಶ್ ಕುಮಾರ್ ಒಟ್ಟು 317 ಕೆ.ಜಿ ಭಾರ ಎತ್ತಿದರು.
ಪುರುಷರ 85 ಕೆ.ಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ವೆಂಕಟ್ ರಾಹುಲ್ ರಾಗಲ ಚಿನ್ನ ಗೆದ್ದರು. ಒಟ್ಟು 338 ಕೆ.ಜಿ ಭಾರ ಎತ್ತಿ ಅವರು ಈ ಸಾಧನೆ ಮಾಡಿದರು. ಇವರಿಬ್ಬರ ಅಮೋಘ ಸಾಧನೆಯಿಂದಾಗಿ ಕೂಟದಲ್ಲಿ ಭಾರತ ಗೆದ್ದ ಚಿನ್ನದ ಪದಕಗಳ ಸಂಖ್ಯೆ ನಾಲ್ಕಕ್ಕೆ ಏರಿತು.
ತೊಡೆನೋವಿನಿಂದ ಬಳಲುತ್ತಿದ್ದ ಸತೀಶ್ ಯಶಸ್ಸು ಸಾಧಿಸುವ ಭರವಸೆ ಇರಲಿಲ್ಲ. ಆದರೆ ತಮಿಳುನಾಡಿನ ಈ ಕ್ರೀಡಾಪಟು ನೋವು ನುಂಗಿ ದೇಶಕ್ಕೆ ಪದಕ ಗೆದ್ದುಕೊಟ್ಟರು. ಸ್ನ್ಯಾಚ್‌ನಲ್ಲಿ 144 ಕೆ.ಜಿ ಭಾರ ಎತ್ತಿದ ಸತೀಶ್ ಅವರು ಕ್ಲೀನ್ ಮತ್ತು ಜರ್ಕ್‌ನಲ್ಲಿ 173 ಕೆ.ಜಿ ಎತ್ತಿದರು. ಸ್ನ್ಯಾಚ್‌ನ ಮೊದಲ ಪ್ರಯತ್ನದಲ್ಲಿ 136 ಕೆ.ಜಿ ಎತ್ತಿದ ಅವರು ನಂತರದ ಪ್ರಯತ್ನಗಳಲ್ಲಿ ಕ್ರಮವಾಗಿ 140 ಮತ್ತು 144 ಕೆ.ಜಿ ಸಾಧನೆ ಮಾಡಿದರು.
ಕ್ಲೀನ್ ಮತ್ತು ಜರ್ಕ್‌ನ ಮೊದಲ ಎರಡು ಪ್ರಯತ್ನಗಳಲ್ಲಿ 169 ಮತ್ತು 173 ಕೆ.ಜಿ ಎತ್ತಿದರು. ಪ್ರತಿಸ್ಪರ್ಧಿಗಳು ಈ ಮಟ್ಟಕ್ಕೆ ಏರದ ಕಾರಣ ಅವರಿಗೆ ಮೂರನೇ ಪ್ರಯತ್ನ ಮಾಡುವ ಅಗತ್ಯವಿರಲಿಲ್ಲ.
ಇಂಗ್ಲೆಂಡ್‌ನ ಜಾಕ್ ಒಲಿವರ್ ಮತ್ತು ಆಸ್ಟ್ರೇಲಿಯಾದ ಫ್ರಾಂಕೋಯ್ಸ್ ಎಟೌಂಡಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ಸ್ನ್ಯಾಚ್ ವಿಭಾಗದ ಪ್ರಯತ್ನಗಳು ಕೊನೆಗೊಂಡಾಗ ಸತೀಶ್ ನಿರಾಸೆಗೆ ಒಳಗಾಗಿದ್ದರು. ಮೂರನೇ ಪ್ರಯತ್ನದಲ್ಲಿ ಪ್ರತಿಸ್ಪರ್ಧಿ ಒಲಿವರ್ ಒಂದು ಕೆ.ಜಿ ಹೆಚ್ಚು ಭಾರ ಎತ್ತಿದ್ದರು. ಆದರೆ ಕ್ಲೀನ್ ಮತ್ತು ಜರ್ಕ್‌ನಲ್ಲಿ ಸತೀಶ್ ಅವರನ್ನು ಹಿಂದಿಕ್ಕಲು ಒಲಿವರ್‌ಗೆ ಸಾಧ್ಯವಾಗಲಿಲ್ಲ.
ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅವರು ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 194 ಕೆ.ಜಿ ಭಾರ ಎತ್ತುವ ಪ್ರಯತ್ನದ ವೇಳೆ ತೊಡೆಯಲ್ಲಿ ನೋವು ಕಾಣಿಸಿಕೊಂಡಿತು. ಹೀಗಾಗಿ ಕಾಮನ್‌ವೆಲ್ತ್ ಕೂಟದಲ್ಲಿ ಉತ್ತಮ ಸಾಧನೆ ಮಾಡುವ ಭರವಸೆಯನ್ನು ಕಳೆದುಕೊಂಡಿದ್ದರು. ಇಲ್ಲಿಗೆ ಬರುವಾಗ ಅವರು ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಅವರ ಯಶಸ್ಸಿನ ಹಾದಿಗೆ ಇದು ಯಾವುದೂ ಅಡ್ಡಿಯಾಗಲಿಲ್ಲ.
‘ತೊಡೆಯಲ್ಲಿ ವಿಪರೀತ ನೋವು ಇತ್ತು. ಹೀಗಾಗಿ ಕುಳಿತುಕೊಳ್ಳುವುದಕ್ಕೂ ಕಷ್ಟವಾಗುತ್ತಿತ್ತು. ಆದರೆ ಪ್ರತಿಯೊಬ್ಬರೂ ನನ್ನ ಬಗ್ಗೆ ಕಾಳಜಿ ವಹಿಸಿದರು; ಮನೋಬಲ ತುಂಬಿದರು. ಆದರೂ ಪದಕ ಗೆಲ್ಲುವ ನಿರೀಕ್ಷೆ ಮೂಡಿರಲಿಲ್ಲ. ಸೂಕ್ತ ರೀತಿಯ ಅಭ್ಯಾಸವನ್ನೂ ಮಾಡಿರಲಿಲ್ಲ. ಹೀಗಾಗಿ ಪದಕದ ನಿರೀಕ್ಷೆಯೂ ಇರಲಿಲ್ಲ.
‘ಕ್ಲೀನ್ ಮತ್ತು ಜರ್ಕ್‌ನಲ್ಲಿ ಇನ್ನಷ್ಟು ಭಾರ ಎತ್ತುವುದು ನನಗೆ ಅಸಾಧ್ಯವಾಗಿತ್ತು. ಆದರೆ ಒಲಿವರ್ ಹಿನ್ನಡೆ ಅನುಭವಿಸಿದ್ದರಿಂದ ಮೂರನೇ ಪ್ರಯತ್ನಕ್ಕೆ ಇಳಿಯುವ ಅಗತ್ಯ ಬೀಳಲಿಲ್ಲ. ಇದು ನನ್ನ ಅದೃಷ್ಟವೆಂದೇ ಹೇಳಬೇಕು’ ಎಂದು ಸತೀಶ್ ಅಭಿಪ್ರಾಯಪಟ್ಟರು.
2014ರ ಕಾಮನ್‌ವೆಲ್ತ್ ಕೂಟದಲ್ಲಿ ಸತೀಶ್ ಒಟ್ಟು 328 ಕೆ.ಜಿ (149 ಕೆ.ಜಿ ಸ್ನ್ಯಾಚ್ ಹಾಗೂ 179 ಕೆ.ಜಿ ಕ್ಲೀನ್ ಮತ್ತು ಜರ್ಕ್) ಎತ್ತಿ ಚಿನ್ನ ಗೆದ್ದಿದ್ದರು.
ಮಹಿಳೆಯರ 63 ಕೆ.ಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ವಂದನಾ ಗುಪ್ತಾ ಐದನೇ ಸ್ಥಾನ ಗಳಿಸಿದರು.
**
ಏಷ್ಯನ್ ಗೇಮ್ಸ್‌ಗೆ ಅಭ್ಯಾಸ ನಡೆಸಲು ಸಾಕಷ್ಟು ಕಾಲಾವಕಾಶ ಇದೆ. ಆದ್ದರಿಂದ ಅಲ್ಲಿ ಇದಕ್ಕಿಂತ ಉತ್ತಮ ಸಾಧನೆ ಮಾಡುವ ಭರವಸೆ ಇದೆ.
– ಸತೀಶ್ ಶಿವಲಿಂಗಂ, ಚಿನ್ನ ಗೆದ್ದ ವೇಟ್‌ಲಿಫ್ಟರ್