ನವದೆಹಲಿ: ಆಯಾ ರಾಜ್ಯಗಳ ಲೋಕಸೇವಾ ಆಯೋಗಗಳು ಹಾಗೂ ಸಿಬ್ಬಂದಿ ಆಯ್ಕೆ ಮಂಡಳಿಗಳು ಸರ್ಕಾರಿ ಹುದ್ದೆಗಳ ನೇಮಕಕ್ಕೆ ಆಯೋಜಿಸುವ ಪ್ರಕ್ರಿಯೆಯು ಕ್ಯಾಮೆರಾ ಕಣ್ಗಾವಲಿನಲ್ಲೇ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಸಹಾಯಕ ಶಿಕ್ಷಕರ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಮೇಘಾಲಯ ಹೈಕೋರ್ಟ್, ಕಳೆದ ನವೆಂಬರ್‌ನಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆದರ್ಶಕುಮಾರ್ ಗೋಯಲ್ ಹಾಗೂ ಆರ್.ಎಫ್. ನಾರಿಮನ್ ಅವರಿದ್ದ ಪೀಠ, ಪಾರದರ್ಶಕತೆ ಮತ್ತು ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ನೇಮಕಾತಿಯ ಸಂಪೂರ್ಣ ಪ್ರಕ್ರಿಯೆಯ ಚಿತ್ರೀಕರಣಕ್ಕೆ ಆದ್ಯತೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
‘ಸರ್ಕಾರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯ ಪರಿಶುದ್ಧತೆ ಕಾಪಾಡುವ ನಿಟ್ಟಿನಲ್ಲಿ, ಸಂಬಂಧಿಸಿದ ಮಂಡಳಿಗಳು ಹಾಗೂ ಆಯಾ ರಾಜ್ಯಗಳ ಲೋಕಸೇವಾ ಆಯೋಗಗಳು ಲಿಖಿತ ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಸಂದರ್ಶನ ಕೇಂದ್ರಗಳಲ್ಲಿ ಸಾಧ್ಯವಾದಷ್ಟು ಸಿ.ಸಿ. ಟಿ.ವಿ. ಕ್ಯಾಮರಾಗಳನ್ನು ಅಳವಡಿಸುವುದು ಅಪೇಕ್ಷಣೀಯ’ ಎಂದು ನ್ಯಾಯಪೀಠ ತಿಳಿಸಿದೆ.
ನೇಮಕಾತಿ ಪ್ರಕ್ರಿಯೆಯ ವಿಡಿಯೊ ಫೂಟೇಜ್‌ಗಳನ್ನು ಮೂವರು ತಜ್ಞರನ್ನೊಳಗೊಂಡ ಸ್ವತಂತ್ರ ಸಮಿತಿಯು ಪರಿಶೀಲಿಸಿ ವರದಿ ಸಲ್ಲಿಸಬೇಕು. ನಂತರ ಆ ವರದಿಯನ್ನು ಸಂಬಂಧಿಸಿದ ಆಯೋಗಗಳ ವೆಬ್‌ಸೈಟ್‌ಗಳಲ್ಲಿ ಅಳವಡಿಸುವಂತಾಗಬೇಕು ಎಂದು ಪೀಠ ಆದೇಶಿಸಿದೆ.
ಈ ಆದೇಶದ ಕುರಿತು ಕೂಡಲೇ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಗಮನ ಸೆಳೆಯಬೇಕಲ್ಲದೆ, ಸಂಬಂಧಿಸಿದ ಆಯ್ಕೆ ಮಂಡಳಿಗಳಿಗೆ ಆದೇಶದ ಪ್ರತಿಯನ್ನು ರವಾನಿಸಬೇಕು ಎಂದು ನ್ಯಾಯಮೂರ್ತಿಯವರು ಸೂಚಿಸಿದರು.
ಕೆಪಿಎಸ್‌ಸಿ ಅಕ್ರಮ ಪ್ರಸ್ತಾಪ:
ನೇಮಕಾತಿ ಅಕ್ರಮದ ಅನೇಕ ಪ್ರಕರಣಗಳು ದೇಶದಾದ್ಯಂತ ವರದಿಯಾಗುತ್ತಲೇ ಇವೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2011ನೇ ಸಾಲಿನ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಕ್ಕೆ ನಡೆಸಿರುವ ಆಯ್ಕೆ ಪ್ರಕ್ರಿಯೆಯಲ್ಲಿನ ಅಕ್ರಮ ಕುರಿತೂ ವಿಚಾರಣೆ ನಡೆಸಿರುವ ನ್ಯಾಯಾಲಯ, ಎರಡು ದಿನಗಳ ಹಿಂದಷ್ಟೇ ಆದೇಶ ನೀಡಿದೆ ಎಂದು ನ್ಯಾಯಮೂರ್ತಿ ಗೋಯಲ್ ಪ್ರಸ್ತಾಪಿಸಿದರು.
ಕರ್ನಾಟಕದಲ್ಲಿ ನಡೆದ ನೇಮಕಾತಿ ವೇಳೆ ಲಂಚಕ್ಕೆ ಬೇಡಿಕೆ ಇರಿಸಲಾಗಿದೆ ಎಂದು ಆರೋಪಿಸಿ ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿತ್ತು. ಸದಸ್ಯರೆಲ್ಲ ಅಭ್ಯರ್ಥಿಗಳೊಂದಿಗೆ ನೇರ ಸಂಪರ್ಕದಲ್ಲಿರುವುದು, ಸಂದರ್ಶನದಲ್ಲಿ 566 ಅಭ್ಯರ್ಥಿಗಳಿಗೆ ಒಂದೇ ರೀತಿಯ ಅಂಕ ನೀಡಿರುವುದು ಬೆಳಕಿಗೆ ಬಂದಿದೆ. ನಂತರ ಅಲ್ಲಿನ ಹೈಕೋರ್ಟ್ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿ ಆದೇಶಿಸಿದೆ. ಮುಖ್ಯ ಲಿಖಿತ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆಯೇ ಎಂಬುದನ್ನು ಪರಿಶೀಲಿಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ನ್ಯಾಯಪೀಠ ವಿವರಿಸಿದೆ.