ಬೆಂಗಳೂರು: ಪ್ರಾಥಮಿಕ ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ‘ನಲಿ–ಕಲಿ’ ಪದ್ಧತಿ ಅವೈಜ್ಞಾನಿಕವಾಗಿದೆ. ಇದರಿಂದ ಕನ್ನಡ ಕಲಿಕೆ ಹಾದಿ ತಪ್ಪುತ್ತಿದೆ ಎಂದು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬೇಂದ್ರೆ ಕೃಷ್ಣಪ್ಪ ಕಳವಳ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಘಟಕ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ನಲಿ–ಕಲಿಯಲ್ಲಿ ಅಲ್ಪಪ್ರಾಣ, ಮಹಾಪ್ರಾಣ, ಸ್ವರಗಳು, ವರ್ಗೀಯ ಹಾಗೂ ಅವರ್ಗೀಯ ವ್ಯಂಜನಗಳನ್ನು ಆರಂಭಿಕ ಕಲಿಕೆಯಲ್ಲಿ ಹೇಳಿಕೊಡುತ್ತಿಲ್ಲ. ಇದರಿಂದಾಗಿ ಪದವಿ ಓದಿದ ವಿದ್ಯಾರ್ಥಿಗಳಿಗೂ ಒತ್ತಕ್ಷರ, ದೀರ್ಘಾಕ್ಷರ ಬಳಕೆ ಬಗ್ಗೆ ಸರಿಯಾದ ಜ್ಞಾನವೇ ಇಲ್ಲವಾಗಿದೆ ಎಂದು ದೂರಿದರು.
‘ಪದ ಚಕ್ರ’ ಹಾಗೂ ‘ಜಾಣ ಜಾರೋ ಪಟ್ಟಿ’ಯ ಮೂಲಕ ನೇರವಾಗಿ ಪದಗಳನ್ನೇ ಕಲಿಸಲಾಗುತ್ತದೆ. ಪದ ಕಲಿಸಿ, ಅಕ್ಷರ ಕಲಿಸುವುದು ಇಂಗ್ಲಿಷ್ ಮಾದರಿ. ಇದು ಕನ್ನಡ ಭಾಷೆಗೆ ಒಗ್ಗುವುದಿಲ್ಲ. ಕ್ರಮಬದ್ಧವಾಗಿ ಕನ್ನಡ ಕಲಿಸದೆ ಕನ್ನಡ ಭಾಷೆಯ ಮೂಲಬೇರನ್ನು ಕತ್ತರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳು ಕನ್ನಡ ಮಾಧ್ಯಮದಲ್ಲಿಯೇ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಕಲಿಯಬೇಕು. ಭಾಷೆಯನ್ನೇ ಸರಿಯಾಗಲಿ ಕಲಿಯದ ಮಕ್ಕಳು ಉನ್ನತ ಶಿಕ್ಷಣದಲ್ಲಿ ಸೋಲುತ್ತಿದ್ದಾರೆ. ಇದರಿಂದ ಉದ್ಯೋಗ ಪಡೆಯುವಲ್ಲಿಯೂ ವಂಚಿತರಾಗುತ್ತಿದ್ದಾರೆ ಎಂದು ವಿವರಿಸಿದರು.
ಸಾಹಿತಿಗಳು, ಅನುಕೂಲಸ್ಥ ಕನ್ನಡಿಗರು, ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸದಿರುವುದರಿಂದ ಅವರಿಗೆ ಈ ಸಮಸ್ಯೆ ಅನುಭವಕ್ಕೆ ಬರುತ್ತಿಲ್ಲ. ರಾಜ್ಯದಲ್ಲಿ ಹೆಚ್ಚು ಇಂಗ್ಲಿಷ್ ಶಾಲೆಗಳನ್ನು ನಡೆಸುತ್ತಿರುವವರು ಕನ್ನಡಿಗರು ಎಂದು ಹೇಳಿದರು.
ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿಲ್ಲ ಎಂದು ತಿಳಿದಿದ್ದರೂ ಸಾಹಿತಿಗಳು ಪ್ರತಿಭಟಿಸುವುದಿಲ್ಲ. ಕನ್ನಡದ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳಾಗಿವೆ. ಕನಿಷ್ಠ ಸರ್ಕಾರ ಜಾರಿಗೆ ತಂದಿರುವ ‘1ನೇ ತರಗತಿಯಿಂದ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು’ ಎನ್ನುವ ನೀತಿ ಪಾಲನೆಯಾಗುವಂತೆ ನೋಡಿಕೊಂಡರೂ ಕನ್ನಡ ಉಸಿರಾಡುತ್ತದೆ ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ, ‘ಜಾಗತಿಕ ಗ್ರಾಮದ ಪರಿಕಲ್ಪನೆಯಲ್ಲಿ ಕನ್ನಡ ವಿಸ್ತರಿಸಿದ್ದರೂ, ಕನ್ನಡಿಗರಲ್ಲಿ ಕನ್ನಡ ಉಳಿಸುವ ಬಗ್ಗೆ ಇರುವ ಇಚ್ಛಾಶಕ್ತಿ ದಟ್ಟ ದಾರಿದ್ರ್ಯ ಸ್ಥಿತಿಯಲ್ಲಿದೆ. ಭಾಷೆಯನ್ನು ಪ್ರೀತಿಸುವುದರಲ್ಲಿ ತಮಿಳಿಗರು ಯಾವತ್ತಿಗೂ ಮಾದರಿ. ಅವರ ಇಚ್ಛಾಶಕ್ತಿಯ ಬಗ್ಗೆ ಗೌರವವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಬಹುತ್ವದ ರಾಷ್ಟ್ರಗಳಲ್ಲಿ ಬಹು ಸಂಸ್ಕೃತಿಯನ್ನು ಉಳಿಸುವ ಪ್ರಜಾಸತ್ತಾತ್ಮಕವಾದ ಧೋರಣೆ ಇರಬೇಕು. ಇತ್ತೀಚಿನ ಬೆಳವಣಿಗೆಗಳು ತುಂಬ ಆತಂಕಕಾರಿಯಾಗಿದ್ದು, ನಿಧಾನಕ್ಕೆ ನಮ್ಮ ಪರಂಪರೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದಕ್ಕೆ ಎಸ್‌ಬಿಎಂ, ಎಸ್‌ಬಿಐನಲ್ಲಿ ವಿಲೀನವಾದ ಪ್ರಕ್ರಿಯೆಯೇ ನಿದರ್ಶನ’ ಎಂದು ಹೇಳಿದರು.
‘2017ರಲ್ಲಿ ಕನ್ನಡ ಕಲಿಕೆಯ ಹೊಸ ನೀತಿ ಜಾರಿಯಾಗಿದೆ. 2018ನೇ ಶೈಕ್ಷಣಿಕ ವರ್ಷದಿಂದಲೂ ಅದು ಅನುಷ್ಠಾನಗೊಳ್ಳಲಿಲ್ಲ ಎಂದರೆ, ಅವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಕನ್ನಡ ಉಳಿಯುತ್ತದೆ’ ಎಂದರು.