ಉಡುಪಿ: ಇಲ್ಲಿನ ಕುಂದಾಪುರ ತಾಲ್ಲೂಕಿನ ಕೋಡಿ ಗ್ರಾಮದಲ್ಲಿ ಶೌಚಾಲಯ ಗುಂಡಿ ಸ್ವಚ್ಛ ಮಾಡುತ್ತಿದ್ದ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. 32 ವರ್ಷದ ಸಂದೀಪ್ ಮೃತ ದುರ್ದೈವಿ. ಮನೆ ಮಾಲಿಕ ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿದಾಗ ಗ್ರಾಮಸ್ಥರು ಯುವಕನನ್ನು ಬದುಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಿನ್ನೆ ಮಧ್ಯಾಹ್ನ ಸುಮಾರು 2 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.
ಪರಿಶಿಷ್ಠ ಪಂಗಡಕ್ಕೆ ಸೇರಿದ ಸಂದೀಪ್ ಹಲವು ಸಮಯಗಳಿಂದ ಅನೇಕ ಮನೆಗಳ ಶೌಚಾಲಯ ಗುಂಡಿಗಳನ್ನು ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದ. ನಾಳೆ ತನ್ನ ಮಗಳ ಮದುವೆಯಿರುವುದರಿಂದ ಶೌಚಾಲಯ ಗುಂಡಿಯನ್ನು ಸ್ವಚ್ಛ ಮಾಡ ಬೇಕೆಂದು ಅಬ್ದುಲ್ ಖಾದರ್ ಜಿಲಾನಿ ಸಂದೀಪ್ ಗೆ ಬರಲು ಹೇಳಿದ್ದರು. ಸಂದೀಪ್ ಶೌಚಾಲಯದ ಗುಂಡಿಯೊಳಗೆ ಹೋಗಿ ಸ್ವಲ್ಪ ಹೊತ್ತು ಕಳೆದ ನಂತರ ಹೊರಗಿದ್ದವರಿಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದನು. ಆಗ ಮೇಲಿದ್ದವರು ಹೊರಗೆ ಬರಲು ಕೂಡಲೇ ಹಗ್ಗ ಇಳಿಸಿದ್ದರು. ಆದರೆ ಸಂದೀಪ್ ಗೆ ಹಗ್ಗ ಹಿಡಿದು ತನ್ನಷ್ಟಕ್ಕೆ ಹೊರಗೆ ಬರಲು ಸಾಧ್ಯವಾಗಲಿಲ್ಲ. ಹೊರಗಿದ್ದವರು ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿದ್ದ ಸಂದೀಪ್ ನನ್ನು ಹೊರತಂದರು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ದಾರಿ ಮಧ್ಯೆಯೇ ಮೃತಪಟ್ಟನು.
ಸಂದೀಪ್ ನನ್ನು ಶೌಚಾಲಯ ಗುಂಡಿ ಸ್ವಚ್ಛತೆಗೆ ಇಳಿಸಿದ ಮನೆ ಮಾಲಿಕ ಅಬ್ದುಲ್ ಖಾದರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304-ಎಯಡಿ ನಿರ್ಲಕ್ಷ್ಯತನ ಮತ್ತು ಸಾವಿಗೆ ಕಾರಣರಾದ ಕೇಸು ದಾಖಲಿಸಲಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಅಬ್ದುಲ್ ಖಾದರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯಡಿ ಮತ್ತು ಮಲ ಹೊರುವ ಕಾಯಕ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆಯಡಿ ಕೂಡ ಕೇಸು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.