ಕೋಲಾರ; ಚಿನ್ನದ ನಾಡು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡಮಲೈನ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಜನಾಶೀರ್ವಾದ ಯಾತ್ರೆಯನ್ನು ಆರಂಭಿಸಿದ್ದಾರೆ.
ಬೆಂಗಳೂರಿನಿಂದ ಹೆಲಿಪ್ಯಾಡ್ ಮೂಲಕ ತೆರಳಿರುವ ರಾಹುಲ್ ಅವರು ಕೋಲಾರ ಜಿಲ್ಲೆಗೆ ತಲುಪುತ್ತಿದ್ದಂತೆಯೇ ಗಣಪತಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ರಾಹುಲ್ ಆವರದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಕೆ.ಸಿ.ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಸಾಥ್ ನೀಡಿದ್ದರು.
ಹೆಲಿಪ್ಯಾಡ್ ಮೂಲಕ ರಾಹುಲ್ ಅವರು ಕುರುಡಮಲೆಯಲ್ಲಿ ಇಳಿಯುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಅವರನ್ನು ನೋಡಲು ಮುಗಿಬಿದ್ದರು. ನಂತರ ಪೊಲೀಸರು ಹಾಗೂ ಭದ್ರತಾ ಪಡೆಗಳು ಕಾರ್ಯಕರ್ತರಿಂದ ದೂರಕ್ಕೆ ಕರೆತಂದು ರಾಹುಲ್ ಅವರು ದೇಗುಲ ಪ್ರವೇಶ ಮಾಡುವಂತೆ ಮಾಡಿದರು.
ಕೋಲಾರ ಜಿಲ್ಲೆಯ ಕೆಜಿಎಫ್, ಬಂಗಾರಪೇಟೆ ಮತ್ತು ಕೋಲಾರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ, ರೋಡ್ ಶೋ ಹಾಗೂ ಸಾರ್ವಜನಿಕ ಸಭೆಗಳಲ್ಲಿಯೂ ರಾಹುಲ್ ಭಾಗವಹಿಸಲಿದ್ದಾರೆ.