ಕಾವೇರಿ ನೀರು ವ್ಯರ್ಥವಾಗದಂತೆ, ಸದುಪಯೋಗ ಮಾಡಿಕೊಳ್ಳುವುದಕ್ಕಾಗಿ ಕಟ್ಟೆ ಕಟ್ಟಬೇಕು ಎಂಬ ಲೆಕ್ಕಾಚಾರ ನಾಲ್ಕು ಶತಮಾನಕ್ಕೂ ಹಿಂದಿನಿಂದಲೂ ಇತ್ತು. 1701 ರಲ್ಲಿ ರಾಜ ಚಿಕ್ಕದೇವರಾಜ ಒಡೆಯರ್, ಕನ್ನಂಬಾಡಿ ಬಳಿ ಬೃಹತ್ ಮಣ್ಣಿನ ಅಣೆಕಟ್ಟೆ ಕಟ್ಟಿದ್ದರೂ, ಒಂದೇ ವರ್ಷದೊಳಗೆ ಅದು ಕುಸಿಯಿತು ಎಂಬ ಉಲ್ಲೇಖಗಳಿವೆ.
ಪ್ರಸ್ತುತ ಕೆ.ಆರ್.ಎಸ್ ಇರುವ ಕನ್ನಂಬಾಡಿ ಎಂಬುದರ ಹಿನ್ನೆಲೆ ನೋಡಿದರೆ, ನುಗು ನಾಡಿನ ರಾಜನ ಮಗಳು ಕಕ್ಕಬ್ಬೆಗೆ ಪೈಲ್ವಾನ್ ಜತೆ ವಿವಾಹವಾಗಿತ್ತು, ಪಂದ್ಯದಲ್ಲಿ ಈತ ರಾಜನ ಸಂಬಂಧಿಯನ್ನೇ ಸಾಯಿಸಿ, ಆಗಿನ ರಾಜಧಾನಿಯಾಗಿದ್ದ ತಲಕಾಡಿಗೆ ಓಡಿದ. ಅಲ್ಲೂ ನೆಮ್ಮದಿಯಾಗಿರಲಾಗದೆ ಸಾವಿಗೀಡಾದ. ಗಂಡನ ಸಾವಿಂಗ ಕಂಗೆಟ್ಟ ಹೆಂಡತಿ ತನ್ನೆಲ್ಲ ಭೂಮಿ, ಒಡವೆ, ವಸ್ತ್ರವನ್ನೆಲ್ಲ ಉಂಬಳಿಯಾಗಿ ಕೊಟ್ಟು ತಾನೂ ಸಾವಿಗೆ ಶರಣಾದಳು. ಆ ಉಂಬಳಿಯ ಸ್ಥಳವೇ ಕನ್ನಂಬಾಡಿಯಾಯಿತು.
ಕನ್ನಂಬಾಡಿ ನೂರಿಪ್ಪತ್ತು ಬ್ರಾಹ್ಮಣರಿದ್ದ ಅಗ್ರಹಾರ. ಒಮ್ಮೆ ಸಿಡುಬು, ಕಾಲರಾ ಬಂದು ಜನರೆಲ್ಲ ಸಾಯುವಂತಾದಾಗ, ನಂಜಮ್ಮ ಎಂಬಾಕೆ ಮೇಲೆ ದೇವತೆ ಬಂದು, ರೋಗ ರುಜಿನ ತೊಡೆದಳು. ಆ ದೇವತೆಗಾಗಿ ಕನ್ನಂಬಾಡಿಯಲ್ಲಿ ದೇವಾಲಯ ಕಟ್ಟಿಸಿ ಪೂಜಿಸುತ್ತಾ ಬರಲಾಯಿತು ಎಂದು ಶಾಸನದಲ್ಲಿದೆ.
ಹೀಗೆ ಎರಡು ಕತೆಯನ್ನೊಂದಿರುವ ಕನ್ನಂಬಾಡಿ ಇನ್ನೊಂದು ಘಟನೆಗೂ ಸಾಕ್ಷಿಯಾಗಿದೆ. 17ನೇ ಶತಮಾನದ ರಾಜ ಒಡೆಯರಿಗೂ ಕಾರುಗಳ್ಳಿಯ ವೀರರಾಜಯ್ಯನಿಗೂ ದ್ವೇಷವಿತ್ತು. ಆಗ ವೀರರಾಜಯ್ಯ ಒಬ್ಬ ಅರ್ಚಕನನ್ನ ಕೈಗಾಕಿಕೊಂಡು, ರಾಜ ಒಡೆಯರ್ ಗೆ ಪ್ರಸಾದದಲ್ಲಿ ವಿಷ ಬೆರಸಿ ಕೊಲ್ಲಲು ಸಂಚು ಹೂಡಿರುತ್ತಾನೆ. ಇದು ರಾಜ ಒಡೆಯರ್ ಗೆ ಗೊತ್ತಾಗಿ, ಆ ಅರ್ಚಕನನ್ನ ಕನ್ನಂಬಾಡಿ ದೇವಾಲಯಕ್ಕೆ ವರ್ಗಾಯಿಸಿದ್ದರು ಎಂಬ ಉಲ್ಲೇಖಗಳಿವೆ. ಇಷ್ಟು ಇತಿಹಾಸವನ್ನೊಂದಿರುವ ಕನ್ನಂಬಾಡಿ ಈಗ ವಿಶ್ವದಾದ್ಯಂತ ಗಮನ ಸೆಳೆಯುತ್ತಿರುವ ಕೆ.ಆರ್.ಎಸ್. ಅಥವಾ ಕನ್ನಂಬಾಡಿ ಕಟ್ಟೆ ಎಂದೇ ಖ್ಯಾತವಾಗಿದೆ.