ಧಾರವಾಡ : ‘ಯಾರೇ ಕೂಗಾಡಲಿ, ಊರೇ ಹೋರಾಡಲಿ…ನಿನ್ನ ನೆಮ್ಮದಿಗೆ ಭಂಗವಿಲ್ಲ. ಎಮ್ಮೆ ನಿನಗೆ ಸಾಟಿಯಿಲ್ಲ’.. ಇದು ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಡಾ| ರಾಜ್‌ಕುಮಾರ ಅವರು ಎಮ್ಮೆ ಮೇಲೆ ಕುಳಿತು ಎಮ್ಮೆ ಬಗ್ಗೆ ಹಾಡಿಸುವ ಸಾಲಿದು. ಹೌದು..ಅಣ್ಣಾರ ಈ ಹಾಡಿನಿಂದ ಎಮ್ಮೆಗೆ ಒಂದು ಡಿಮ್ಯಾಂಡ್ ಕೂಡ ಬಂದಿತ್ತು. ಇದೀಗ ಮತ್ತೆ ಎಮ್ಮೆ ಸುದ್ದು
ಮಾಡುತ್ತಿದ್ದು, ವಿಶ್ವಮಟ್ಟದಲ್ಲಿ ಗಮನ ಸೆಳೆಯಲು ಮುಂದಾಗಿದೆ.

ವಿಶ್ವಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವ ಧಾರವಾಡ ಪೇಢೆಯ ಸ್ವಾದಿಷ್ಟಕ್ಕೆ ಕಾರಣ ಆಗಿರುವ ಧಾರವಾಡಿ ಎಮ್ಮೆ ಹಾಲಿನೊಂದಿಗೆ ಈಗ ಆ ತಳಿಯ ಎಮ್ಮೆ ಕರ್ನಾಟಕ ರಾಜ್ಯದ ಏಕೈಕ ಎಮ್ಮೆ ತಳಿ ಎಂಬ ಹೆಮ್ಮೆಗೆ ಪಾತ್ರವಾಗಲಿದೆ. ಇದರೊಂದಿಗೆ ದೇಶದಲ್ಲಿ ಈವರೆಗೆ ಗುರುತಿಸಲಾದ ಎಮ್ಮೆ ತಳಿಗಳ ಪಟ್ಟಿಯಲ್ಲೂ ಧಾರವಾಡಿ ಎಮ್ಮೆಗೆ ಸ್ಥಾನ ಲಭಿಸಿದೆ. ದೇಶದಲ್ಲಿ ಈ ವರೆಗೆ ೧೪ ಎಮ್ಮೆ ತಳಿಗಳನ್ನು ಗುರುತಿಸಲಾಗಿದ್ದು, ಇವೆಲ್ಲವೂ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಈ ತಳಿಗಳ ಪೈಕಿ ಕರ್ನಾಟಕದಿಂದ ಒಂದೂ ತಳಿಯೂ ಇಲ್ಲ. ಆದರೆ ಈಗ ಕರ್ನಾಟಕ ರಾಜ್ಯದಿಂದ ಧಾರವಾಡ ಭಾಗದ ದೇಶಿ ಎಮ್ಮೆ ತಳಿಯೂ ಈ ಪೈಕಿ ಒಂದಾಗಲಿದೆ.

ಧಾರವಾಡದ ಕೃಷಿ ವಿವಿಯ ಪಶು ವಿಜ್ಞಾನ ವಿಭಾಗವು ಐಸಿಏಆರ್ ನೆಟ್‌ವರ್ಕ್ ಪ್ರೊಜೆಕ್ಟ್ ಆನ್ ಏಎನ್‌ಜಿಆರ್ ‘ಧಾರವಾಡಿ ಎಮ್ಮೆ ತಳಿಯ ಗುಣಲಕ್ಷಣಗಳ ಸಂಶೋಧನಾ ಯೋಜನೆ’ ಅಡಿ ೨೦೧೫-೧೬ ನೇ ಸಾಲಿನಿಂದ ಸಂಶೋಧನೆ ಕೈಗೊಂಡು, ೨-೩ ವರ್ಷಗಳ ಸಂಶೋಧನೆ ಬಳಿಕ ೨೦೧೭ರ ಡಿಸೆಂಬರ್‌ನಲ್ಲಿ ಸಂಶೋಧನಾತ್ಮಕವಾದ ಅಂತಿಮ ವರದಿಯನ್ನು ಸಲ್ಲಿಕೆ ಮಾಡಿದೆ.

ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯಾದ ಎನ್‌ಬಿಎಆರ್‌ಜಿ ಸಂಸ್ಥೆ ಹಾಗೂ ಕೃಷಿ ವಿವಿಯ ಪಶು ವಿಜ್ಞಾನ ವಿಭಾಗದ ಸಹಯೋಗದಲ್ಲಿ ಈ ಸಂಶೋಧನೆ ಆಗಿದ್ದು, ಇದಕ್ಕಾಗಿ ಸಂಸ್ಥೆಯು ೨೯ ಲಕ್ಷ ರೂ. ಅನುದಾನ ಕೂಡ ಒದಗಿಸಿತ್ತು. ಈಗ ಸಲ್ಲಿಕೆ ಆಗಿರುವ ವರದಿಗೆ ಸಂಸ್ಥೆಯಿಂದ

RELATED ARTICLES  600 ಕುಟುಂಬಗಳಿಗೆ ಮಾಜಿ ಶಾಸಕ ಮಂಕಾಳ ವೈದ್ಯರಿಂದ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ

ಉತ್ತಮ ಪ್ರಶಂಸೆ ಲಭಿಸಿದ್ದು, ಇದೀಗ ಕೃಷಿ ವಿವಿಯಿಂದ ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ತಳಿ ಘೋಷಣೆಗೆ ಶಿಫಾರಸ್ಸು ತಲುಪವುದೊಂದೇ ಬಾಕಿ ಇದೆ.

ಕೃಷಿ ವಿಶ್ವವಿದ್ಯಾಲಯದ ಪ್ರಾಣಿ ವಿಜ್ಞಾನ ವಿಭಾಗದಿಂದ ಈಗಾಗಲೇ ಧಾರವಾಡಿ ಎಮ್ಮೆಯ ತಳಿಯ ಗುಣಲಕ್ಷಣಗಳ ಸಮಗ್ರ ವರದಿ ಸಲ್ಲಿಕೆ ಮಾಡಿದೆ. ಇದೀಗ ಈ ಭಾಗದ ರೈತರಿಂದ ಈ ತಳಿಯನ್ನು ಘೋಷಣೆ ಮಾಡುವಂತೆ ಅರ್ಜಿ ಪಡೆದು, ಅವುಗಳೊಂದಿಗೆ ಕೃಷಿ ವಿವಿಯಿಂದ ರಾಜ್ಯ ಸರಕಾರದ ಪಶು ವೈದ್ಯಕೀಯ ಇಲಾಖೆಗೆ ಈ ಪ್ರಸ್ತಾವನೆ ಸಲ್ಲಿಕೆ ಆಗಬೇಕಿದೆ.

ಇದಾದ ಬಳಿಕ ರಾಜ್ಯ ಸರಕಾರದಿಂದ ಕೇಂದ್ರ ಸರಕಾರದ ಅಽನ ಸಂಸ್ಥೆ ಹರಿಯಾಣದ ಐಸಿಎಆರ್-ಎನ್‌ಬಿಎಜಿಆರ್ ಸಂಸ್ಥೆಗೆ (ಪ್ರಾಣಿ ಜೀವ ವೈವಿಧ್ಯತೆಯ ಸಂಶೋಧನಾ ಸಂಸ್ಥೆ) ಈ ಪ್ರಸ್ತಾವನೆ ಸಲ್ಲಿಕೆ ಆಗಲಿದೆ. ನಂತರ ಅಲ್ಲಿಯ ಆಡಳಿತ ಮಂಡಳಿಯೇ ಈ ತಳಿಗೆ ನೋಂದಣಿ ಸಂಖ್ಯೆ ನೀಡಿ, ಈ ತಳಿಗೂ ಮಾನ್ಯತೆ ನೀಡಿ ಧಾರವಾಡಿ ಎಮ್ಮೆ ತಳಿಯನ್ನಾಗಿ ಘೋಷಣೆ ಮಾಡಲಿದೆ. ಇದೆಲ್ಲ ಪ್ರಕ್ರಿಯೆ ಮುರಿಯಲು ಇನ್ನೂ ೩-೪ ತಿಂಗಳು ಕಾಯಬೇಕಿದ್ದು, ಆ ಬಳಿಕ ದೇಶದ ಎಮ್ಮೆ ತಳಿಗಳ ಪಟ್ಟಿಯಲ್ಲಿ ಧಾರವಾಡಿ ಎಮ್ಮೆಯೂ ಸಹ ಸ್ಥಾನ ಪಡೆಯಲಿದೆ.

ಕೃಷಿ ವಿವಿಯ ಪಶು ವಿಜ್ಞಾನ ವಿಭಾಗದ ವಿಜ್ಞಾನಿ ಡಾ| ವಿ.ಎಸ್.ಕುಲಕರ್ಣಿ ಅವರ ನೇತೃತ್ವದಲ್ಲಿ ಧಾರವಾಡ, ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಆಯ್ದ ಒಟ್ಟು ೬೪ ಹಳ್ಳಿಗಳಲ್ಲಿ ಈ ಸಂಶೋಧನೆ ಮಾಡಲಾಗಿದೆ. ಈ ಹಳ್ಳಿಗಳ ೩೯೩೭ ಜನ ರೈತರಲ್ಲಿನ ೧೦,೬೫೦ ಧಾರವಾಡಿ ಎಮ್ಮೆಗಳ ಬಗ್ಗೆ ಸತತ ಎರಡು ವರ್ಷಗಳ ಕಾಲ ಅಧ್ಯಯನ ಮಾಡಲಾಗಿದೆ. ೨೦೧೨ರ ಜಾನುವಾರು ಗಣತಿ ಪ್ರಕಾರ ಈ ನಾಲ್ಕು ಜಿಲ್ಲೆಗಳಲ್ಲಿ ೧೨ ಲಕ್ಷ ೫ ಸಾವಿರದಷ್ಟು ಎಮ್ಮೆಗಳಿದ್ದು, ಈ ಪೈಕಿ ಶೇ.೮೦ ರಷ್ಟು ಧಾರವಾಡಿ ಎಮ್ಮೆಗಳೇ ಇರುವುದು ಅಧ್ಯಯನದಲ್ಲಿ ಕಂಡು ಬಂದಿದೆ.

RELATED ARTICLES  ಕಾರ್ಮಿಕರ ಸೋಗಿನಲ್ಲಿ ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶದ ನಿವಾಸಿಗಳ ಪತ್ತೆಗೆ ಮನವಿ

ಎಮ್ಮೆಗಳ ಅಳತೆ, ಆಕಾರ, ಗುಣಧರ್ಮಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲಾಗಿದ್ದು, ಎಮ್ಮೆಗಳ ಹಾಲಿನ ಉತ್ಪಾದನೆ, ಸಂತಾನೋತ್ಪತ್ತಿಯ ಸಾಮರ್ಥ್ಯದ ಶಕ್ತಿಯ ಪರೀಕ್ಷೆಯೂ ಸಹ ಮಾಡಲಾಗಿದೆ. ಅಲ್ಲದೇ ರಕ್ತದ ಮಾದರಿ ತೆಗೆದುಕೊಂಡು ಅವುಗಳ ಡಿಎನ್‌ಎ ಕುರಿತಂತೆಯೂ ಹೆಚ್ಚಿನ ಸಂಶೋಧನೆ ಕೈಗೊಳ್ಳಲಾಗಿದೆ. ಇನ್ನೂ ಅರ್ಧಚಂದ್ರಾಕೃತಿ ಕೊಡು, ಕರೀ ಬಣ್ಣದ ಚರ್ಮ ಇರುವ ಎಮ್ಮೆಗಳು ಹೆಚ್ಚಾಗಿರುವುದು ತಿಳಿದು ಬಂದಿದೆ. ಇದಲ್ಲದೇ ಒಂದು ಎಮ್ಮೆ ಒಂದು ಸೂಲಿನಲ್ಲಿ ೯೮೦ ಲೀಟರ್ ಹಾಲು ಕೊಡುವ ಸಾಮರ್ಥ್ಯ ಇದ್ದು, ವರ್ಷದ ೩೩೫ ದಿನ ಹಾಲು ಕೊಡುವ ಗುಣಲಕ್ಷಣ ಹೊಂದಿದೆ. ಈ ಹಾಲಿನಲ್ಲಿ ಶೇ.೭ ರಷ್ಟು ಕೊಬ್ಬಿನಾಂಶ ಇದ್ದು, ಕೊಬ್ಬು ರಹಿತ ಉತ್ಪನ್ನಗಳಲ್ಲಿ ಶೇ.೯.೫ ರಷ್ಟು ಇದೆ ಎಂಬುದನ್ನು ಅಧ್ಯಯನದಲ್ಲಿ ದಾಖಲಿಸಲಾಗಿದೆ.

ಈ ಧಾರವಾಡಿ ಎಮ್ಮೆ ತಳಿಗಳ ಗುಣಮಟ್ಟಕ್ಕೆ ಕೋಣವೇ ಮುಖ್ಯ ಆಗಲಿದ್ದು, ಹೀಗಾಗಿ ಈ ತಳಿಯ ಗುಣಮಟ್ಟದ ಕೋಣಗಳನ್ನು ಸಿದ್ದಪಡಿಸಿ, ಅವುಗಳ ವೀರ್ಯ ಸಂಗ್ರಹಿಸುವ ಕಾರ್ಯ ಆಗಬೇಕಾಗಿದೆ. ಇವುಗಳ ಉತ್ತಮ ವೀರ್ಯದಿಂದ ಜನಿಸುವ ಎಮ್ಮೆಗಳು ಮತ್ತಷ್ಟು ಗುಣಮಟ್ಟದಿಂದ ಕೂಡಿರಲು ಸಾಧ್ಯವಾಗಲಿದ್ದು, ಇದರಿಂದ ಈ ತಳಿ ತ್ವರಿತವಾಗಿ ಮುಂದೆ ಬರಲಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಪ್ರಾಣಿ ವಿಜ್ಞಾನ ವಿಭಾಗದ ವಿ.ಎಸ್.ಕುಲಕರ್ಣಿ ತಿಳಿಸಿದ್ದಾರೆ.