ಗೋಲ್ಡ್ ಕೋಸ್ಟ್: ಭಾರತದ ಮಹಿಳಾ ತಂಡದವರು ಕಾಮನ್‌ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನಿಸ್‌ನಲ್ಲಿ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದರು.
ಭಾನುವಾರ ನಡೆದ ತಂಡ ವಿಭಾಗದ ಫೈನಲ್‌ನಲ್ಲಿ ಭಾರತ 3–1ರಿಂದ ಬಲಿಷ್ಠ ಸಿಂಗಪುರ ತಂಡಕ್ಕೆ ಆಘಾತ ನೀಡಿತು. ಸಿಂಗಪುರ ತಂಡ 2014ರ ಗ್ಲಾಸ್ಗೊ ಕೂಟದಲ್ಲಿ ಚಿನ್ನದ ಸಾಧನೆ ಮಾಡಿತ್ತು.
2002ರಲ್ಲಿ ಮೊದಲ ಬಾರಿಗೆ ಕಾಮನ್‌ವೆಲ್ತ್ ಕೂಟದಲ್ಲಿ ಟೇಬಲ್ ಟೆನಿಸ್ ಸ್ಪರ್ಧೆಯನ್ನು ಸೇರಿಸಲಾಗಿತ್ತು. ಅಂದಿನಿಂದ ಸಿಂಗಪುರ ಈ ಕ್ರೀಡೆಯಲ್ಲಿ ಪ್ರಾಬಲ್ಯ ಮೆರೆದಿತ್ತು.
2006ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಕೂಟದಲ್ಲಿ ಭಾರತದ ಪುರುಷರ ಟೇಬಲ್ ಟೆನಿಸ್ ತಂಡದವರು ಚಿನ್ನ ಗೆದ್ದಿದ್ದರು. ಮಹಿಳೆಯರಿಂದ ಈ ಸಾಧನೆ ಮೂಡಿಬಂದಿದ್ದು ಇದೇ ಮೊದಲು.
ಸಿಂಗಪುರ ಎದುರಿನ ಫೈನಲ್‌ನಲ್ಲಿ ಮಣಿಕಾ ಬಾತ್ರಾ ಭಾರತಕ್ಕೆ ಗೆಲುವಿನ ಆರಂಭ ನೀಡಿದರು.
ಸಿಂಗಲ್ಸ್ ವಿಭಾಗದಲ್ಲಿ ಕಣಕ್ಕಿಳಿದಿದ್ದ ಮಣಿಕಾ 11–8, 8–11, 7–11, 11–9, 11–7ರಲ್ಲಿ ತಿಯಾನ್‌ವೀ ಫೆಂಗ್ ಅವರಿಗೆ ಆಘಾತ ನೀಡಿದರು.
ವಿಶ್ವ ಕ್ರಮಾಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಹೊಂದಿದ್ದ ಫೆಂಗ್, ವಿಶ್ವ ರ‍್ಯಾಂಕಿಂಗ್‌ನಲ್ಲಿ 58ನೇ ಸ್ಥಾನದಲ್ಲಿ ರುವ ಮಣಿಕಾ ವಿರುದ್ಧ ಸುಲಭ ಗೆಲುವು ಸಾಧಿಸಬಹುದು ಎಂದೇ ಭಾವಿಸಲಾಗಿತ್ತು.
ಆದರೆ ಮಣಿಕಾ, ಅಪೂರ್ವ ಆಟ ಆಡಿ ಈ ನಿರೀಕ್ಷೆಯನ್ನು ಹುಸಿ ಗೊಳಿಸಿದರು. ಆರಂಭಿಕ ಗೇಮ್‌ನಲ್ಲಿ ಮೋಡಿ ಮಾಡಿದ ಮಣಿಕಾ, ಆಕರ್ಷಕ ಸರ್ವ್ ಮತ್ತು ಬಲಿಷ್ಠ ಹಿಂಗೈ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.
ಇದರಿಂದ ಕಿಂಚಿತ್ತೂ ವಿಚಲಿತ ರಾಗದ ಫೆಂಗ್, ಎರಡನೆ ಗೇಮ್‌ನಲ್ಲಿ ಅಬ್ಬರಿಸಿದರು. ಬಿರುಗಾಳಿ ವೇಗದಲ್ಲಿ ಚೆಂಡನ್ನು ಬಾರಿಸಿ ಭಾರತದ ಆಟಗಾರ್ತಿಯನ್ನು ಕಂಗೆಡಿಸಿದ ಅವರು ಗೇಮ್ ಜಯಿಸಿ 1–1ರಲ್ಲಿ ಸಮಬಲ ಮಾಡಿಕೊಂಡರು.
ಇದರಿಂದ ವಿಶ್ವಾಸ ಹೆಚ್ಚಿಸಿಕೊಂಡ ಅವರು ಮೂರನೆ ಗೇಮ್‌ನಲ್ಲೂ ಗರ್ಜಿಸಿದರು. ಫೆಂಗ್ ಅವರ ಟಾಪ್‌ಸ್ಪಿನ್ ಹೊಡೆತಗಳನ್ನು ಹಿಂತಿರುಗಿಸಲು ವಿಫಲವಾದ ಭಾರತದ ಆಟಗಾರ್ತಿ ಸುಲಭವಾಗಿ ಗೇಮ್ ಕೈಚೆಲ್ಲಿದರು.
1–2ರ ಹಿನ್ನಡೆ ಕಂಡರೂ ಮಣಿಕಾ ಎದೆಗುಂದಲಿಲ್ಲ. ನಾಲ್ಕನೆ ಗೇಮ್‌ನಲ್ಲಿ ಭಾರತದ ಆಟಗಾರ್ತಿ ಗುಣಮಟ್ಟದ ಆಟ ಆಡಿದರು. ಚುರುಕಿನ ಸರ್ವ್‌ಗಳನ್ನು ಮಾಡಿದ ಅವರು ಮಿಂಚಿನ ರಿಟರ್ನ್‌ಗಳ ಮೂಲಕ ಪಾಯಿಂಟ್ಸ್ ಕಲೆಹಾಕಿ ಎದುರಾಳಿಯ ಸರ್ವ್ ಮುರಿದರು. ಹೀಗಾಗಿ 2–2ರ ಸಮಬಲ ಕಂಡುಬಂತು.
ನಿರ್ಣಾಯಕ ಎನಿಸಿದ್ದ ಐದನೆ ಗೇಮ್‌ನಲ್ಲಿ ಉಭಯ ಆಟಗಾ ರ್ತಿಯರೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 7–7ರಲ್ಲಿ ಸಮಬಲ ಕಂಡುಬಂತು. ಈ ಹಂತದಲ್ಲಿ ಆಕ್ರಮಣಕಾರಿ ಆಟ ಆಡಿದ ಮಣಿಕಾ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.
ಎರಡನೆ ಸಿಂಗಲ್ಸ್‌ನಲ್ಲಿ ಮಧುರಿಕಾ ಪಾಟ್ಕರ್ ನಿರಾಸೆಗೊಂಡರು. ಹೀಗಾಗಿ ಪಂದ್ಯ 1–1ರಲ್ಲಿ ಸಮಬಲವಾಯಿತು.
ಮಧುರಿಕಾ 11–13, 2–11, 6–11ರಲ್ಲಿ ಮೆಂಗ್ಯು ಯು ವಿರುದ್ಧ ಸೋತರು. ಮೊದಲ ಗೇಮ್‌ನಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದ ಭಾರತದ ಆಟಗಾರ್ತಿ ನಂತರದ ಎರಡು ಗೇಮ್‌ಗಳಲ್ಲಿ ಮಂಕಾದರು.
ಡಬಲ್ಸ್ ವಿಭಾಗದಲ್ಲಿ ಅಂಗಳಕ್ಕಿಳಿದಿದ್ದ ಮೌಮಾ ದಾಸ್ ಮತ್ತು ಮಧುರಿಕಾ ಪಾಟ್ಕರ್ ಅವರು ಮೋಡಿ ಮಾಡಿದರು.
ಮೌಮಾ ಮತ್ತು ಮಧುರಿಕಾ 11–7, 11–6, 8–11, 11–7ರಲ್ಲಿ ಯಿಹಾನ್ ಜುವು ಮತ್ತು ಮೆಂಗ್ಯು ಯು ಅವರನ್ನು ಸೋಲಿಸಿ ಭಾರತಕ್ಕೆ 2–1ರ ಮುನ್ನಡೆ ತಂದುಕೊಟ್ಟರು.
ಮೂರನೆ ಸಿಂಗಲ್ಸ್‌ನಲ್ಲಿ ಮಣಿಕಾ 11–7, 11–4, 11–7ರಲ್ಲಿ ಯಿಹಾನ್ ಜೊವು ಅವರನ್ನು ಪರಾಭವಗೊಳಿಸಿದರು. ಮೊದಲ ಗೇಮ್‌ನಲ್ಲಿ ಕೆಚ್ಚೆದೆಯಿಂದ ಹೋರಾಡಿದ ಮಣಿಕಾ ತಾವು ಮಾಡಿದ ಸರ್ವ್‌ಗಳನ್ನು ಕಾಪಾಡಿಕೊಂಡರು. ಜೊತೆಗೆ ಎದುರಾಳಿಯ ಸರ್ವ್‌ಗಳನ್ನೂ ಮುರಿದು ಪಾಯಿಂಟ್ಸ್ ಸಂಗ್ರಹಿಸಿದರು.
ಎರಡು ಮತ್ತು ಮೂರನೆ ಗೇಮ್‌ಗಳಲ್ಲೂ ಪರಾಕ್ರಮ ಮೆರೆದ ಅವರು ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.
ಇದಕ್ಕೂ ಮುನ್ನ ನಡೆದಿದ್ದ ಎರಡನೆ ಸೆಮಿಫೈನಲ್ ಹೋರಾಟದಲ್ಲಿ ಭಾರತ 3–0ರಿಂದ ಇಂಗ್ಲೆಂಡ್ ತಂಡದ ಸವಾಲು ಮೀರಿ ನಿಂತಿತ್ತು.