ಉತ್ತರ ಕನ್ನಡ: ದುರಹಂಕಾರಿಯಾದ ರಾಜ್ಯದ ಮುಖ್ಯಮಂತ್ರಿಯನ್ನು ನೋಡಿದ್ದು ಇದೇ ಮೊದಲು. ಚುನಾವಣೆ ಕಳೆದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕದ ಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದು, ನನ್ನ ಬೂತ್‌ಗೆ ನಾನೇ ಅಭ್ಯರ್ಥಿ ಎಂದುಕೊಂಡು ಪ್ರತಿಯೊಬ್ಬರೂ ಮತ ಹಾಕಿ ಅಂತಾ ಕರೆ ನೀಡಿದ್ದಾರೆ.
ಜಿಲ್ಲೆಯ ಸಿದ್ದಾಪುರದ ಬಿಳಗಿಯಲ್ಲಿ ನಡೆದ ಬಿಜೆಪಿ ದೊಡ್ಮನೆ ಮಹಾಶಕ್ತಿ ಕೇಂದ್ರದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 144 ಸೆಕ್ಷನ್ ಹಾಕಿ ಟಿಪ್ಪು ಜಯಂತಿಯನ್ನು ಆಚರಿಸಿದ ಮೊದಲ ಸರ್ಕಾರ ಕಾಂಗ್ರೆಸ್. ಜಾತಿಯ ಓಲೈಕೆಯಿಂದ ಭಾಗ್ಯಗಳನ್ನು ತಂದ, ಜಾತಿಯ ನಡುವೆ ವಿಷಬೀಜ ಬಿತ್ತಿದಂತ ಸರ್ಕಾರ ಈಗಿನ ಕಾಂಗ್ರೆಸ್ ಸರ್ಕಾರ. ಮುಂದಿನ ವಿಧಾನಸಭೆ ಚುನಾವಣೆ ಹಿಂದೂಗಳ ಮರ್ಯಾದೆಯ ಪ್ರಶ್ನೆಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಸುನಿಲ್ ಕುಮಾರ್ ಗೆ ಸಾಥ್ ನೀಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮುಂದಿನ ಸರ್ಕಾರ ನಮ್ಮದೇ, ಬಿ.ಎಸ್. ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ. ನಾವು ಗೆಲ್ಲೋದು ಬೂತ್ ನಲ್ಲಿ, ಬೂತ್ ಗಳನ್ನು ಬಲಪಡಿಸೋಣ. ನಾವು ಈ ಸಾರಿ 50 ಸಾವಿರಕ್ಕಿಂತಲೂ ಹೆಚ್ಚಿಗೆ ಮತಗಳಿಂದ ಗೆಲ್ಲುತ್ತೇವೆ. ಬಿಜೆಪಿಗೆ ಮತ ನೀಡಿ, ರಾಜ್ಯವನ್ನ ಇನ್ನೂ ಅಭಿವೃದ್ಧಿ ಮಾಡೋಣ ಎಂದರು. 8 ಗ್ರಾಮ ಪಂಚಾಯಿತಿ ಹಾಗೂ 36 ಬೂತ್ ಗಳಿಂದ ಕೂಡಿದ ದೊಡ್ಮನೆ ಮಹಾಶಕ್ತಿ ಕೇಂದ್ರ ಸಭೆ ಇದಾಗಿತ್ತು.