ನವದೆಹಲಿ: ಏಪ್ರಿಲ್ 12ರಂದು ಪ್ರಧಾನಿ ನರೇಂದ್ರ ಮೋದಿ ಉಪವಾಸ ಸತ್ಯಾಗ್ರಹ ಮಾಡ್ತೀನಿ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳಿಗೆ ಅಚ್ಚರಿ ಮೂಡಿಸಿದ್ದಾರೆ. ವಿರೋಧ ಪಕ್ಷಗಳು ಸಂಸತ್ತು ಕಾರ್ಯನಿರ್ವಹಿಸಲು ಬಿಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿರುವ ಪ್ರಧಾನಿ ಮೋದಿ, ಉಪವಾಸ ಮಾಡುವುದಾಗಿ ಘೋಷಿಸಿದ್ದಾರೆ. ಏಪ್ರಿಲ್ 12ರಂದು ಅಮಿತ್ ಶಾ ಜೊತೆಗೂಡಿ ಇಡೀ ದಿನ ಉಪವಾಸ ಮಾಡುವುದಾಗಿ ಮೋದಿ ಹೇಳಿದ್ದಾರೆ. ಎಲ್ಲಾ ಬಿಜೆಪಿ ಸಂಸದರು ಮೋದಿ ಹಾಗೂ ಅಮಿತ್ ಶಾ ಗೆ ಸಾಥ್ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಉಪವಾಸದ ಹೊರತಾಗಿ ಮೋದಿ ತಮ್ಮ ದಿನನಿತ್ಯದ ಕಾರ್ಯಗಳನ್ನ ಎಂದಿನಂತೆ ಮುಂದುವರೆಸಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಹುಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಕಾವೇರಿ ವಿವಾದ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಪಿಎನ್ಬಿ ಹಗರಣ ಹಾಗೂ ಮುಂತಾದ ಕಾರಣಗಳನ್ನ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಕಾರಣ ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗಕ್ಕೆ ಅಡ್ಡಿಯುಂಟಾಗಿದೆ. ಮಾರ್ಚ್ 5ರಂದು ಆರಂಭವಾದ ಅಧಿವೇಶನದ ಎರಡನೇ ಭಾಗದಲ್ಲಿ ಯಾವುದೇ ಶಾಸಕಾಂಗ ಪ್ರಕ್ರಿಯೆಗಳು ನಡೆದಿಲ್ಲ.