ಕಾರವಾರ: ರಾಜಕೀಯ ಪಕ್ಷಗಳು ಜಿಲ್ಲೆಯಲ್ಲಿ ಅತ್ಯಂತ ಪ್ರತಿಷ್ಠೆಯ ಕಣಗಳಲ್ಲಿ ಒಂದು ಎಂದೇ ಪರಿಗಣಿಸಿರುವ ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಭಾನುವಾರ ರಾತ್ರಿ ಪ್ರಕಟವಾದ ಪಕ್ಷದ ಮೊದಲ ಪಟ್ಟಿಯಲ್ಲೇ ರೂಪಾಲಿ ನಾಯ್ಕ ಅವರ ಹೆಸರನ್ನು ಪಕ್ಷದ ವರಿಷ್ಠರು ಸೇರಿಸಿದ್ದಾರೆ. ಈ ಮೂಲಕ ಈ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯು ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಪಕ್ಷದ ಟಿಕೆಟ್ ಯಾರಿಗೆ ಎಂದು ಕಾರ್ಯಕರ್ತರು ವರಿಷ್ಠರು ಸಿಕ್ಕಲ್ಲೆಲ್ಲ ಪ್ರಶ್ನಿಸುತ್ತಿದ್ದರು. ಜೆಡಿಎಸ್‌ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಸುಮಾರು ಒಂದು ತಿಂಗಳಿಂದ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈಗಾಗಲೇ ಕ್ಷೇತ್ರದಾದ್ಯಂತ ಒಂದು ಬಾರಿ ಸಂಚಾರ ಮುಗಿಸಿದ ಅವರು, ಎರಡನೇ ಸುತ್ತಿನ ಪ್ರಚಾರ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಕಾಂಗ್ರೆಸ್
ಟಿಕೆಟ್ ನಿರೀಕ್ಷೆಯಲ್ಲಿರುವ ಶಾಸಕ ಸತೀಶ್ ಸೈಲ್ ಕೂಡ ಅಂಕೋಲಾ ಭಾಗದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಹೀಗಿರುವಾಗ ಅಭ್ಯರ್ಥಿ ಘೋಷಣೆ ಮತ್ತಷ್ಟು ತಡವಾದರೆ ಪ್ರಚಾರಕ್ಕೆ ತೊಡಕಾಗಲಿದೆ ಎಂಬುದು ಬಿಜೆಪಿ ಕಾರ್ಯಕರ್ತರ ಆತಂಕವಾಗಿತ್ತು.

RELATED ARTICLES  ಉದ್ಘಾಟನೆ‌ಗೊಂಡಿತು ಕೆರೆ: ಜೀವ ಜಲದ‌ಬಗ್ಗೆ ನಡೆಯಿತು ಚಿಂತನ ಮಂಥನ.

ಮುಖಂಡರಾದ ಗಣಪತಿ ಉಳ್ವೇಕರ್, ನಾಗರಾಜ ನಾಯ್ಕ, ರಾಮು ರಾಯ್ಕರ್, ಗಂಗಾಧರ ಭಟ್, ಶಾರದಾ ನಾಯ್ಕ ಅವರ ಹೆಸರು ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿತ್ತು. ಈ ನಡುವೆ, ಇವರು ಯಾರೂ ಅಲ್ಲದೇ ಹೊಸ ಮುಖವೊಂದನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಬಹುದು ಎಂಬ ಸುದ್ದಿಯೂ ಕಾರ್ಯಕರ್ತರ ನಡುವೆ ಕೇಳಿಬಂದಿತ್ತು.

ಈ ಬಗ್ಗೆ ಮಾತನಾಡಿದ ಜಿಲ್ಲಾ ಘಟಕದ ವಕ್ತಾರ ರಾಜೇಶ್ ನಾಯ್ಕ, ‘ರೂ‍ಪಾಲಿ ನಾಯ್ಕ ಆರು ತಿಂಗಳಿನಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಹೆಚ್ಚು ತೊಡಗಿಕೊಂಡಿದ್ದರು. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ರೂ‍ಪಾಲಿ ಅವರು ಇದೇ 17ರ ನಂತರ ಒಳ್ಳೆಯ ಮುಹೂರ್ತ ನೋಡಿ ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ಹೇಳಿದರು.

RELATED ARTICLES  ಅಪರಿಚಿತ ಶವ ಪತ್ತೆ : ಕೊರೋನಾ ನಿಯಮ ಮೀರಿ ಕೇಸ್: ಉಗ್ರ ನಂಟು ಆರೋಪಿ ಬಗ್ಗೆ ಹೆಬ್ಬಾರ್ ಮಾತು.

ಟಿಕೆಟ್ ನಿರೀಕ್ಷೆಯಲ್ಲಿದ್ದ ಬಿಜೆಪಿಯ ಬೆಂಗಳೂರು ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾರದಾ ನಾಯ್ಕ ಮಾತನಾಡಿ, ‘ನಾನು ಟಿಕೆಟ್ ನಿರೀಕ್ಷೆ ಮಾಡಿದ್ದು ನಿಜ. ಆದರೆ, ವರಿಷ್ಠರ ತೀರ್ಮಾನವನ್ನು ಗೌರವಿಸಿ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಮಹಿಳೆಗೆ ಇದೇ ಮೊದಲ ಬಾರಿ ಸ್ಪರ್ಧೆಗೆ ಅವಕಾಶ ನೀಡಿರುವುದು ಖುಷಿಯ ವಿಚಾರ’ ಎಂದರು.

ಜಿಲ್ಲೆಯಲ್ಲಿ ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾವಾಗ ಆಗಬಹುದು ಎಂದು ಸ್ಥಳೀಯ ಮುಖಂಡರನ್ನು ಕೇಳಿದರೆ, ‘ವರಿಷ್ಠರು ಶೀಘ್ರವೇ ಪ್ರಕಟಿಸಲಿದ್ದಾರೆ’ ಎಂದಷ್ಟೇ ಹೇಳುತ್ತಾರೆ.