ಬೆಂಗಳೂರು: ಮದುವೆ, ಹುಟ್ಟುಹಬ್ಬ ಮತ್ತು ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಚುನಾವಣಾ ಆಯೋಗದ ಪೂರ್ವಾನುಮತಿ ಅಗತ್ಯವಿಲ್ಲ. ಈ ಕಾರ್ಯಕ್ರಮಗಳಿಗೆ ಚುನಾವಣಾ ನೀತಿ ಸಂಹಿತೆ ಅನ್ವಯ ಆಗುವುದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಮಂಗಳವಾರ ಸ್ಪಷ್ಟಪಡಿಸಿದರು.

ಸಂವಹನದ ಕೊರತೆಯಿಂದಾಗಿ ಸಾರ್ವಜನಿಕರು ಮದುವೆ, ಹುಟ್ಟುಹಬ್ಬ ಮತ್ತು ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಕೇಳಲು ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮಾದರಿ ನೀತಿ ಸಂಹಿತೆ ಜಾರಿ ದಳದ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಹೇಳಿದರು.

ಯಾರು ಬೇಕಾದರೂ ಖಾಸಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಆದರೆ, ಅಂತಹ ಕಾರ್ಯಕ್ರಮಗಳಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸುವಂತಿಲ್ಲ. ಈ ಕಾರ್ಯಕ್ರಮಗಳ ಮೇಲೆ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಾರಿ ದಳದ ಅಧಿಕಾರಿಗಳು ಕಣ್ಣಿಟ್ಟಿರುತ್ತಾರೆ ಎಂದೂ ಸಂಜೀವ್‌ ಕುಮಾರ್‌ ತಿಳಿಸಿದರು.

RELATED ARTICLES  ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ: ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ.

ಸಾರ್ವಜನಿಕರು ಆಯೋಜಿಸುವ ಖಾಸಗಿ ಕಾರ್ಯಕ್ರಮಗಳಲ್ಲಿ ರಾಜಕೀಯ ವ್ಯಕ್ತಿಗಳು ಉಡುಗೊರೆ ಹಂಚುವುದು ಅಥವಾ ಊಟ ಹಾಕಿಸುವ ಮೂಲಕ ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸಿದರೆ, ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.

ನಗದು ಮಿತಿ ₹ 50 ಸಾವಿರ

ಸಾರ್ವಜನಿಕರು ತಮ್ಮೊಂದಿಗೆ ಯಾವುದೇ ದಾಖಲೆಗಳಿಲ್ಲದೆ ₹ 50 ಸಾವಿರ ನಗದು ಇಟ್ಟುಕೊಂಡು ಪ್ರಯಾಣಿಸಬಹುದು ಎಂದು ಸಂಜೀವ್‌ ಕುಮಾರ್‌ ತಿಳಿಸಿದರು.ಅಲ್ಲದೆ, ₹10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಉಡುಗೊರೆಯನ್ನು ತಮ್ಮೊಂದಿಗೆ ಒಯ್ಯಬಹುದು. ಇದಕ್ಕೆ ದಾಖಲೆಗಳ ಅಗತ್ಯ ಇರುವುದಿಲ್ಲ ಎಂದು ಸಂಜೀವ್‌ ಕುಮಾರ್‌ ಸ್ಪಷ್ಟಪಡಿಸಿದರು.

ನಗದು ಮೊತ್ತ ₹ 50 ಸಾವಿರಕ್ಕಿಂತ ಹೆಚ್ಚು ಇದ್ದರೆ, ಅದಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳಿಗೆ ವಿವರಣೆ ನೀಡಬೇಕು. ₹10 ಲಕ್ಷಕ್ಕಿಂತ ಹೆಚ್ಚು ನಗದು ಒಯ್ಯುತ್ತಿದ್ದರೆ ಅಂತಹವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗುತ್ತದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಚಾರಣೆ ನಡೆಸುತ್ತಾರೆ. ಸೂಕ್ತ ವಿವರಣೆ ಮತ್ತು ದಾಖಲೆಗಳು ಇಲ್ಲದಿದ್ದರೆ ನಗದು ವಶಕ್ಕೆ ತೆಗೆದುಕೊಳ್ಳುತ್ತಾರೆ. ವಿವರಣೆ ಮತ್ತು ದಾಖಲೆ ನೀಡಿದರೆ ಹಣವನ್ನು ಬಿಡುಗಡೆ ಮಾಡುತ್ತಾರೆ ಎಂದರು.

RELATED ARTICLES  ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಮಾತೃ ವಿಯೋಗ.

ಚುನಾವಣಾ ಅಕ್ರಮ ತಡೆಗಟ್ಟುವ ಉದ್ದೇಶದಿಂದ ರಾಜ್ಯದಲ್ಲಿ 1,225 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ವಾಹನಗಳು ಮತ್ತು ಲಗೇಜುಗಳ ತಪಾಸಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು

ಒಂದು ವೇಳೆ ಎಲ್ಲ ದಾಖಲೆಗಳಿದ್ದರೂ ಚೆಕ್‌ಪೋಸ್ಟ್‌ಗಳಲ್ಲಿ ತೊಂದರೆ ನೀಡಿದರೆ ಅಥವಾ ಅಕ್ಷಮ್ಯ ಎನಿಸುವ ರೀತಿಯಲ್ಲಿ ತಪಾಸಣೆ ನಡೆಸಿದರೆ ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷತೆಯ ಸಮಿತಿಗೆ ದೂರು ನೀಡಬಹುದು. ಈ ಸಮಿತಿ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದರು.