ಕುಮಟಾ: ಅಸಾಮಾನ್ಯ ಗುಣ ಅಭಿವ್ಯಕ್ತಿಗೊಳಿಸಲು ಒಬ್ಬ ಸಾಮಾನ್ಯ ವಿದ್ಯಾರ್ಥಿ ಪ್ರಯತ್ನಿಸಿದಾಗ ಮಾತ್ರ ಕ್ಷಿಪ್ರ ಬದಲಾವಣೆ ಕಂಡು ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಸಾಧ್ಯವೆಂದು ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯಪಟ್ಟರು. ಶಾಲಾ ಮಂತ್ರಿ ಮಂಡಳ ಮತ್ತು ವಿವಿಧ ಸಂಘಗಳ ನಿರ್ವಹಣೆಯಿಂದ ನಾಳೆ ನಾಡಕಟ್ಟುವ ಹೊಂಗನಸು ಮಕ್ಕಳಲ್ಲಿ ಮುದಗೊಳ್ಳುತ್ತದೆ. ಅಸಾಮಾನ್ಯತೆಯನ್ನು ಶಿಕ್ಷಕ ಜಾಗೃತಗೊಳಿಸುತ್ತಾನೆ ಎಂದು ಅವರು ತಾಲೂಕಿನ ಊರುಕೇರಿ ರಾಮನಾಥ ಪ್ರೌಢಶಾಲೆಯ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಸಂಘಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಂ.ಎಂ.ನಾಯ್ಕ ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿಸುವ ಹೊಣೆಗಾರಿಕೆಯಿಂದ ಶಿಕ್ಷಕರು ನುಣುಚಿಕೊಳ್ಳಲಾಗದು ಎಂದರು. ವಾಲಗಳ್ಳಿ ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮೀ ಭಟ್ಟ ಶುಭಹಾರೈಸಿದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಶಿವರಾಮ ನಾಯ್ಕ ಮಕ್ಕಳು ನಾಡಿನ ಆಸ್ತಿಯೆಂದರಲ್ಲದೇ ಎಲ್ಲ ಸವಲತ್ತುಗಳನ್ನು ಈಡೇರಿಸಲು ಊರುಕೇರಿ ಸದಾ ಸಿದ್ದವಿದೆ ಎಂದರು. ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕ ಎಸ್.ಜಿ.ಭಟ್ಟ ವಹಿಸಿ ಆದರ್ಶಗುಣಗಳನ್ನು ಪಾಲಿಸಬೇಕಾದ ಮಹತ್ವ ತಿಳಿಸಿದರು. ಪ್ರಾರಂಭದಲ್ಲಿ ಶಿಕ್ಷಕ ಕೆ.ಟಿ.ಮೊಗೇರ ಸ್ವಾಗತಿಸಿದರು. ದೈಹಿಕ ಶಿಕ್ಷಕ ಜೆ.ಎಚ್.ಗೌಡ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕ ಆರ್.ಡಿ.ನಾಯ್ಕ ನಿರೂಪಿಸಿದರು. ಶಿಕ್ಷಕ ಮಹಾಂತೇಶ ತಳವಾರ ವಂದಿಸಿದರು.