ರಾಜ್ಯದ ಕರಾವಳಿಯ ಜೀವನಾಡಿ ಎನಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ತಿಂಗಳು ನೀವೇನಾದರೂ ಸಂಚರಿಸುತ್ತಿದ್ದರೆ ಕುಮಟಾ ಬರುತ್ತಿದ್ದಂತೆ `ಅಳ್ವೆಕೋಡಿ ಈರುಳ್ಳಿ~ ನಿಮ್ಮನ್ನು ಸೆಳೆಯುತ್ತದೆ.

ಹೆದ್ದಾರಿಗುಂಟ ಅಲ್ಲಲ್ಲಿ ರಾಶಿ ಹಾಕಿಟ್ಟ ಗುಲಾಬಿ ಬಣ್ಣದ ಈರುಳ್ಳಿಯ ಬೆಡಗು ಅಲ್ಲಿ ಓಡಾಡುವ ಬೈಕು, ಕಾರು, ಲಾರಿಗಳ ಓಟಕ್ಕೆ ತಡೆಯೊಡ್ಡುತ್ತದೆ. ಹೆದ್ದಾರಿಯಂಚಿನಲ್ಲಿ ಮಾರಿಗೊಂದರಂತೆ ಅಚ್ಚುಕಟ್ಟಾಗಿ ಪೇರಿಸಿಟ್ಟ ಈರುಳ್ಳಿ ತಡಿಯನ್ನು ನೋಡುವುದೇ ಸೊಗಸು. ಕರಾವಳಿಯ ಸೌಂದರ್ಯ ಸವಿಯುತ್ತಾ ಸಾಗುವವರಿಗೆ `ಅರೆ ಈರುಳ್ಳಿಯನ್ನು ಹೀಗೂ ಇಟ್ಟು ಮಾರುತ್ತಾರಲ್ಲ~ ಎನ್ನುವ ಅಚ್ಚರಿ ಉಂಟಾಗುತ್ತದೆ.

ಇವು ಗದ್ದೆಯಿಂದ ಆಗ ತಾನೇ ಕಿತ್ತುಕೊಂಡು ಬಂದ ಈರುಳ್ಳಿ ಎಂಬುದು ಎಂಥವರಿಗೂ ಗೊತ್ತಾಗಿಬಿಡುತ್ತದೆ.

ಕುತೂಹಲ ತಣಿಸಿಕೊಳ್ಳಲು ಈರುಳ್ಳಿ ತಡಿಯ ಬಳಿ ಗಾಡಿ ನಿಲ್ಲಿಸಿದರೆ ಅದರ ರುಚಿ, ಖ್ಯಾತಿ, ಅದನ್ನು ಬೆಳೆಯುವ ವಿಧಾನ ಮುಂತಾದ ಸಂಗತಿಗಳ ಲೋಕ ತೆರೆದುಕೊಳ್ಳುತ್ತಾ ಹೋಗುತ್ತದೆ.

ಈರುಳ್ಳಿಯ ಒಣಗಿದ ಎಲೆಯನ್ನೆಲ್ಲ ಸೇರಿಸಿ ಜಡೆಯಂತೆ ಹೆಣೆದು ತಯಾರಿಸುವ ಕಲಾತ್ಮಕ ಗುಚ್ಛ (ಸಿವಡು, ಹಿಡಿ, ಜುಟ್ಟು) ಹೊಸಬರಲ್ಲಿ ಅಚ್ಚರಿ ಮೂಡಿಸುತ್ತದೆ. ಪ್ರತಿಯೊಂದು ಗುಚ್ಛ 5 ರಿಂದ 10 ಕಿಲೊ ವರೆಗೂ ತೂಗುತ್ತದೆ. ಜಡೆಯಂಥ ಬಾಲವನ್ನೇ ನೇತು ಹಾಕಿ ತೂಗಿ ಬಿಡುವುದಂತೂ ನೋಡಲು ಸೊಗಸು.

ವರ್ಷಗಳಿಂದ ಬಳಸಿ ಇದರ ರುಚಿ ಗೊತ್ತಿದ್ದವರು ಈ ಸೀಸನ್ನಿನಲ್ಲಿ ತಮ್ಮ ಪರಿಚಿತರ ಅಂಗಡಿ ಬಳಿ ತಕ್ಷಣ ಗಾಡಿ ನಿಲ್ಲಿಸಿ ಇಪ್ಪತ್ತೋ… ಐವತ್ತೋ ಕಿಲೊ ಈರುಳ್ಳಿಯನ್ನು ಖರೀದಿ ಮಾಡಿಕೊಂಡು ಹೊರಡುತ್ತಾರೆ.

RELATED ARTICLES  ಸೆಕೆಂಡರಿ ಹೈಸ್ಕೂಲ್ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಹೊನ್ನಾವರ, ಭಟ್ಕಳದಲ್ಲಿ ಈರುಳ್ಳಿ ಬೆಳೆದರೂ ಹೆದ್ದಾರಿಯಂಚಿಗೆ ರಾಶಿ ಹಾಕಿಟ್ಟುಕೊಂಡು ತಿಂಗಳುಗಟ್ಟಲೆ ಮಾರಾಟ ಮಾಡುವಷ್ಟು ಬೆಳೆಯುವುದು ಕುಮಟಾದ ಅಳ್ವೆಕೋಡಿ, ಹಂದಿಗೋಣ, ವನ್ನಳ್ಳಿ ಗ್ರಾಮಗಳಲ್ಲಿ ಮಾತ್ರ.

ಈ ಮೂರು ಗ್ರಾಮಗಳಲ್ಲಿಯೇ ಪ್ರತೀ ವರ್ಷ ಸಾವಿರ ಲಾರಿಗಳಷ್ಟು ಈರುಳ್ಳಿ ಬೆಳೆಯುತ್ತಾರೆ.

ಹೆದ್ದಾರಿಯಿಂದ ಕೇವಲ ಒಂದೆರಡು ಕಿ.ಮೀ. ಅಂತರದಲ್ಲಿ ಸಮುದ್ರ ಇರುವುದರಿಂದ ಸಹಜವಾಗಿ ಇಲ್ಲಿಯ ಗದ್ದೆಯ ಉಸುಕು ಮಿಶ್ರಿತ ಮಣ್ಣು ಈರುಳ್ಳಿ ಬೇಸಾಯಕ್ಕೆ ಪ್ರಶಸ್ತವಾಗಿದೆ.

ಈ ಬೆಳೆಗೆ ನೂರಾರು ವರ್ಷಗಳ ಇತಿಹಾಸವಿದೆ. ಮುಂಗಾರು ಬತ್ತದ ಕೊಯಿಲು ಮುಗಿದ ತಕ್ಷಣ ರೈತರು ಈರುಳ್ಳಿ ಬೇಸಾಯಕ್ಕೆ ಅಣಿಯಾಗುತ್ತಾರೆ. ಲಾರಿ, ಚಕ್ಕಡಿಯಲ್ಲಿ ಕೊಟ್ಟಿಗೆ ಗೊಬ್ಬರ ತಂದು ಹೆದ್ದಾರಿಯಂಚಿಗೆ ರಾಶಿ ಹಾಕಿಟ್ಟುಕೊಂಡು ತಲೆಯ ಮೇಲೆ ಹೊತ್ತು ಗದ್ದೆಗೆ ಸಾಗಿಸುತ್ತಾರೆ. ಕಳೆದ ಬೇಸಿಗೆಯಲ್ಲಿ ತಯಾರಿ ಮಾಡಿಟ್ಟುಕೊಂಡ ಬೀಜವನ್ನು ಮಡಿಯಲ್ಲಿ ಹಾಕಿ ಸಸಿ ತಯಾರಿಸುತ್ತಾರೆ.

ಈರುಳ್ಳಿ ಬೀಜ ತಯಾರು ಮಾಡುವುದೂ ಅತ್ಯಂತ ವಿಶಿಷ್ಟ ಹಾಗೂ ವಿಚಿತ್ರ ಪದ್ಧತಿಯಲ್ಲಿ. ಈರುಳ್ಳಿ ಹೂಗಳಿಂದ ಸಂಗ್ರಹಿಸಿದ ಬೀಜವನ್ನು ಬೇಸಿಗೆಯಲ್ಲಿ ಚೆನ್ನಾಗಿ ಒಣಗಿಸಿ ನಂತರ ಅದಕ್ಕೆ ಬೆಳಕು ಸೋಕದಂತೆ ಕಪ್ಪು ಬಟ್ಟೆಯಲ್ಲಿ ಸುತ್ತಿ ಮಣ್ಣಿನ ಪಾತ್ರೆಯೊಳಗೆ ಸೀಲ್ ಮಾಡಿ ಸಂರಕ್ಷಣೆ ಮಾಡಿಡುತ್ತಾರೆ. ಮಡಿ ತಯಾರಿಸಿದ ನಂತರವೇ ಬೀಜ ಹೊರತೆಗೆಯುತ್ತಾರೆ.

ಗದ್ದೆಗೆ ನಾಟಿ ಮಾಡಿದ ನಾಜೂಕು ಸಸಿಗಳಿಗೆ ಧಕ್ಕೆಯಾಗದಂತೆ ನಿತ್ಯ ಬೆಳಗಿನ ಜಾವಕ್ಕೆ ಎದ್ದು ಸೂರ್ಯ ಹುಟ್ಟುವುದರೊಳಗೆ ಸೊಂಟ ಬಗ್ಗಿಸಿ ಕೊಡದಲ್ಲಿ ಮೆಲ್ಲಗೆ ನೀರುಣಿಸುವುದೇ ದೊಡ್ಡ ಸಾಹಸ. ಈರುಳ್ಳಿ ಸಸಿ ನೆಟ್ಟ ನಂತರ ಅದನ್ನು ಕೀಳುವವರೆಗೂ ರೈತನಿಗೆ ಸರಿಯಾಗಿ ನಿದ್ದೆಯೂ ಇರುವುದಿಲ್ಲ.

RELATED ARTICLES  ಜಿಲ್ಲಾ ಪಂಚಾಯತ ಅನುದಾನದಲ್ಲಿ ತ್ರಿಚಕ್ರ ವಾಹನ ವಿತರಣೆ.

ಗದ್ದೆಯಲ್ಲಿ ಬೆಳೆದ ಈರುಳ್ಳಿಗೆ ಪಕ್ಕದ ಹೆದ್ದಾರಿ ಬದಿಯೇ ದೊಡ್ಡ ಮಾರುಕಟ್ಟೆ. ಹೀಗಾಗಿ ಇದನ್ನು ಮಾರುವ ಸಮಸ್ಯೆ ಇಲ್ಲವೇ ಇಲ್ಲ. ಮಾರ್ಚ್‌ನಲ್ಲಿ ಶುರುವಾಗಿ ಏಪ್ರಿಲ್ ಮುಗಿಯುವ ತನಕವೂ ಅಳ್ವೆಕೋಡಿಯಿಂದ ಹಂದಿಗೋಣ ವರೆಗಿನ ಸುಮಾರು ಮೂರು ಕಿ.ಮೀ.ಗಳಷ್ಟು ಹೆದ್ದಾರಿ ಬದಿ ಎಲ್ಲಿ ನೋಡಿದರೂ ಈರುಳ್ಳಿಯೇ ಕಂಗೊಳಿಸುತ್ತದೆ.

ಇಲ್ಲಿ ಮಧ್ಯವರ್ತಿಗಳ ಜೊತೆ ಕೆಲ ರೈತರೂ ಹೆದ್ದಾರಿ ಬದಿಗಿಟ್ಟು ಈರುಳ್ಳಿ ಮಾರಾಟ ಮಾಡುತ್ತಾರೆ. ಹಾಲಿ ಇದರ ಬೆಲೆ ಕಿಲೋಗೆ 25 ರಿಂದ 35 ರೂ. ಇದೆ. ಮಳೆಗಾಲದಲ್ಲಿ ಇದು ಹಾಳಾಗುವ ಸಾಧ್ಯತೆ ಹೆಚ್ಚಿರುವುದರಿಂದ ಸಂಗ್ರಹಣೆಗೆ ರೈತರು ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ನೆರೆಯ ರಾಜ್ಯಗಳಲ್ಲಿ ಅದನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟು ವರ್ಷವಿಡೀ ಬಳಕೆ ಮಾಡಿಕೊಳ್ಳುತ್ತಾರೆ.

ಕರ್ನಾಟಕದ ಕರಾವಳಿ ಜಿಲ್ಲೆಗಳ ಹೊರತಾಗಿ ನೆರೆಯ ಗೋವಾ ಹಾಗೂ ಕೇರಳದಲ್ಲಿ ಕೂಡ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಈರುಳ್ಳಿಗೆ ಖಾರಕ್ಕಿಂತ ಸಿಹಿಯ ಗುಣ ಹೆಚ್ಚಿರುವುದರಿಂದ ಈ ಎರಡು ರಾಜ್ಯಗಳ ಹೊಟೆಲ್‌ಗಳಲ್ಲಿ ಹೆಚ್ಚಾಗಿ ಇದನ್ನು ಸಲಾಡ್‌ಗೆ ಬಳಕೆ ಮಾಡುತ್ತಾರೆ. ಈ ಕಾರಣದಿಂದ ಇದಕ್ಕೆ `ಸಲಾಡ್ ಈರುಳ್ಳಿ~ ಎಂದೂ ಕರೆಯಲಾಗುತ್ತದೆ.

ನೂರಾರು ವರ್ಷಗಳ ಪರಂಪರೆಯ ಅಳ್ವೆಕೋಡಿ ಈರುಳ್ಳಿಯ ಬೆಡಗು, ಬೇಡಿಕೆ, ರುಚಿ ಉಳಿಸಿಕೊಳ್ಳಲು ಅದರ ಸಾಂಪ್ರದಾಯಿಕ ಕೃಷಿಯೊಂದೇ ಏಕೈಕ ಮಾರ್ಗವಾಗಿದೆ.