ಗೋಸೇವಕ ಡಾ| ವೈ.ವಿ.ಕೆ.ಯವರಿಗೆ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಿಂದ ಅಭಿನಂದನೆ

22 BDK Vidyapeetha1
ಬದಿಯಡ್ಕ : ಕೇವಲ ಮೂರು ಜನರ ಚಿಂತನೆಯಿಂದ ಮೊದಲ್ಗೊಂಡು ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕಾಸರಗೋಡು ಜಿಲ್ಲೆಯ ಉತ್ತಮ ಶಾಲೆಗಳಲ್ಲಿ ಒಂದಾಗಿ ಮೂಡಿಬಂದ ಶ್ರೀಭಾರತೀ ವಿದ್ಯಾಪೀಠದ ಮುಖ್ಯ ರೂವಾರಿ ಡಾ| ವೈ.ವಿ.ಕೃಷ್ಣಮೂರ್ತಿ ಅವರಿಗೆ ಅಭಿವಂದನೆಗಳು ಎಂದು ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಹೇಳಿದರು.
ಅವರು ಗುರುವಾರ ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಯೋಜನೆಯ ಮೂಲಕ ಗೋಶಾಲೆಗಳನ್ನು ತೆರೆಯುವಲ್ಲಿ ಸಕ್ರಿಯತೆಯನ್ನು ತೋರಿಸುತ್ತಾ ವಿಶ್ವಗೋಸಮ್ಮೇಳನ, ಗೋವು-ಮೇವು-ನಾವು ಅಂತೆಯೇ ಹಾಲುಹಬ್ಬವನ್ನೇ ಹರಿಸಿದ ಸೃಜನಶೀಲ ಸಹೃದಯಿ ಡಾ| ವೈ.ವಿ.ಕೃಷ್ಣಮೂರ್ತಿ ದಂಪತಿಯವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಮೂವತ್ತು ವರ್ಷಗಳ ಹಿಂದೆ ಕರೆದಾಗ ಓಡೋಡಿ ಬರುವ ಬದಿಯಡ್ಕದ ಪಶುವೈದ್ಯರಿಗೆ ದೇಶೀಯ ಮಟ್ಟದ ಪ್ರಶಸ್ತಿ ಒಲಿದು ಬಂದಿರುವುದು ಅವರ ಕ್ರೀಯಾಶೀಲತೆಗೆ ಸಾಕ್ಷಿಯಾಗಿದೆ. ಅಂದು ಎಷ್ಟೇ ಕಷ್ಟಬಂದರೂ ಸುಸಂಸ್ಕøತ ಸಮಾಜದ ನಿರ್ಮಾಣಕ್ಕಾಗಿ ನಾಂದಿಹಾಡಿ ಕೇರಳ ಸರಕಾರದ ಮಾನ್ಯತೆಯನ್ನು ಪಡೆಯುವ ತನಕ ಚಿಂತನಾಶೀಲತೆಯೊಂದಿಗಿದ್ದು ಹಲವಷ್ಟು ಯುವಕರನ್ನು ಒಗ್ಗೂಡಿಸಿ ಶಾಲೆಯನ್ನು ಕಟ್ಟಿ ಬೆಳೆಸಿದ ಮಹಾನ್ ವ್ಯಕ್ತಿಗೆ ಇಪ್ಪತ್ತನೇ ವರ್ಷದ ಈ ಶುಭಸಂದರ್ಭದಲ್ಲಿ ಅವರ ಸಾಧನೆಯನ್ನು ಗುರುತಿಸುವ, ಅವರನ್ನು ಪುರಸ್ಕರಿಸಲು ಅವಕಾಶ ದೊರೆತಿರುವುದಕ್ಕೆ ಸಂತೋಷವಿದೆ ಎಂದರು.
ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜೀವನದಲ್ಲಿ ಸಾಧಿಸಿದರೆ ಇಂತಹ ಸಾಧನೆಯನ್ನು ಮಾಡಿ ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.
ಅಭಿವಂದನೆಯನ್ನು ಸ್ವೀಕರಿಸಿದ ಡಾ| ವೈ.ವಿ.ಕೃಷ್ಣಮೂರ್ತಿ ಗೋವಿನ ಕುರಿತಾದ ಮಾಹಿತಿಯನ್ನು ಮಕ್ಕಳಿಗೆ ತಿಳಿಹೇಳಿ, ಗುರಿ ಮತ್ತು ಗುರು ಸ್ಪಷ್ಟವಾಗಿದ್ದಲ್ಲಿ ಸಾಧನೆ ಖಂಡಿತ ಸಾಧ್ಯ ಎಂದರು.
ಶಾಲಾ ಆಡಳಿತ ಸಮಿತಿ ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ಶುಭಹಾರೈಸಿದರು. ಗೋಕರ್ಣ ಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು, ಶಾಲೆಯಲ್ಲಿ ಸೇವೆಗೈದ ಪೂರ್ವ ಅಧ್ಯಾಪಕರು, ಹಿತೈಶಿಗಳಾದ ಬೇ.ಸೀ.ಗೋಪಾಲಕೃಷ್ಣ ಭಟ್, ಈಶ್ವರ ಭಟ್, ಇಂಜಿನಿಯರ್ ಸುಬ್ರಹ್ಮಣ್ಯ, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನಿತೀಶ್ ಕೆ.ಸ್ವಾಗತಿಸಿ, ಕೀರ್ತನ್ ಶೆಟ್ಟಿ ವಂದಿಸಿದರು. ಅಭಿರಾಮ ಕಷ್ಯಪ್ ನಿರೂಪಿಸಿದರು.

RELATED ARTICLES  ನಿಜವಾದ ಗೋರಕ್ಷಕರು ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಹೆದರಬೇಕಿಲ್ಲ: ಮೋಹನ್ ಭಾಗವತ್