ಯಲ್ಲಾಪುರ: ಪಟ್ಟಣ ಪ್ರದೇಶದಲ್ಲಿ ಹಂದಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಂದಿಗಳ ಕಾಟದಿಂದ ಪಟ್ಟಣದ ನಿವಾಸಿಗಳು ಬೇಸತ್ತಿದ್ದಾರೆ.

ಕಾಳಮ್ಮನಗರ, ಉದ್ಯಮನಗರ, ನೂತನನಗರ ಜಡ್ಡಿ ಹಾಗೂ ಸಬಗೇರಿ ಪ್ರದೇಶದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಸ್ಥಳೀಯ ಆಡಳಿತ ಯಾವ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ರಸ್ತೆಯ ಮೇಲೆ ಹಂದಿಗಳು ದಿಢೀರನೆ ಅಡ್ಡ ಬಂದಾಗ ಕಕ್ಕಾಬಿಕ್ಕಿಯಾಗುವ ವಾಹನ ಸವಾರರು ಅಪಘಾತಕ್ಕೊಳಗಾಗುತ್ತಿದ್ದಾರೆ.

ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಹಂದಿಗಳು ಸಾವನ್ನಪ್ಪಿದರೆ ಮನುಷ್ಯರಿಗೆ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯ್ತಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಂದಿ ಸಾಕಾಣಿಕೆದಾರರಿಗೆ ಎಚ್ಚರಿಕೆ ನೀಡಬೇಕು ಎಂಬುದು ಪಟ್ಟಣ ನಿವಾಸಿಗಳ ಆಗ್ರಹವಾಗಿದೆ.

RELATED ARTICLES  ಶಿರಸಿಯಲ್ಲಿ ಹೊಟೆಲ್ ಗೋಡೆ ಕುಸಿತ : ನಾಲ್ವರಿಗೆ ಗಾಯ.

‘ನಾಡ ಹಂದಿಗಳ ಮಾಂಸಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಭಾರಿ ಬೇಡಿಕೆ ಇದೆ. ಒಂದು ಕೆ.ಜಿ. ಮಾಂಸಕ್ಕೆ ₹250-300 ದರ ಸಿಗುತ್ತಿರುವುದರಿಂದ ಕೆಲವರು ಇದನ್ನೇ ದೊಡ್ಡ ಉದ್ಯಮವನ್ನಾಗಿಸಿಕೊಂಡಿದ್ದಾರೆ. ಮತ್ತೊಂದೆಡೆ ಹೊರ ರಾಜ್ಯವಾದ ಗೋವಾದಲ್ಲಿ ಹಂದಿ ಮಾಂಸಕ್ಕೆ ಅಧಿಕ ಬೇಡಿಕೆ ಬಂದಾಗ ಇಲ್ಲಿಯ ನಾಡ ಹಂದಿಗಳನ್ನು ರಫ್ತು ಮಾಡುವ ದೊಡ್ಡ ಜಾಲವೂ ಇದರ ಹಿಂದೆ ಇದೆ’ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಹೇಳಿದರು.

ಪಟ್ಟಣದ ನಿವಾಸಿಗಳು ಮನೆಯ ಸುತ್ತಮುತ್ತಲಿನ ಜಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೂವಿನ ಗಿಡಗಳು ಹಾಗೂ ತರಕಾರಿ ಗಿಡಗಳನ್ನು ತಮ್ಮ ಮನೆ ಬಳಕೆಗಾಗಿ ಬೆಳೆಸಿಕೊಳ್ಳುತ್ತಾರೆ. ಆದರೆ ಈ ಹಂದಿಗಳು ಹಿತ್ತಲಿನೊಳಗೆ ನುಗ್ಗಿ ಅವುಗಳನ್ನು ತಿಂದು ಹಾಳು ಮಾಡುತ್ತಿವೆ. ಇದರಿಂದ ಬೇಸತ್ತ ಕೆಲ ನಿವಾಸಿಗಳು ಪಟ್ಟಣ ಪಂಚಾಯ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES  ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ನಾಡ ಹಂದಿಗಳು ಕೊಳಚೆ ಪ್ರದೇಶದಲ್ಲಿಯೇ ಹೆಚ್ಚಾಗಿರುತ್ತದೆ. ಪಟ್ಟಣ ಪಂಚಾಯ್ತಿ ಅನುಮತಿ ಪಡೆಯದೇ ಬೇಕಾಬಿಟ್ಟಿಯಾಗಿ ಹೊರಗಿನಿಂದ ಮರಿ ತಂದು ಬಿಟ್ಟು, ಅದು ದಷ್ಟಪುಷ್ಟವಾದ ಮೇಲೆ ಪುನಃ ಹಿಡಿದುಕೊಂಡು ಹೋಗುತ್ತಾರೆ. ಜನಸಮಾನ್ಯರಿಗೆ ತೊಂದರೆಯಾಗದಂತೆ ಸಾಕಾಣಿಕೆ ಮಾಡಬೇಕು. ನಾಡಹಂದಿ ಸಾಕಾಣಿಕೆ ಮಾಡುವವರಿಗೆ ಪಟ್ಟಣ ಪಂಚಾಯಿತಿ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಬೇಕು ಎಂದು ಕಾಳಮ್ಮನಗರ ನಿವಾಸಿ ನಾಗರಾಜ ನಾಯಕ ಆಗ್ರಹಿಸಿದರು.