ಯಲ್ಲಾಪುರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಬಿಸಗೋಡ ತಿರುವಿನಿಂದ ಸಾತೊಡ್ಡಿ ಜಲಪಾತಕ್ಕೆ ಸಾಗುವ ರಸ್ತೆಯನ್ನು ಆನಗೋಡ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ದುರಸ್ತಿ ಮಾಡಿಸಿದ್ದಾರೆ.
ಸಾತೊಡ್ಡಿ ಜಲಪಾತಕ್ಕೆ ಸಾಗುವ 26 ಕಿ.ಮೀ ದೂರದ ಈ ರಸ್ತೆಯು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸೇರಿದೆ. ಡಾಂಬರು ಮಾಡಿದ ಆರಂಭದ ಅವಧಿಯಲ್ಲಿ ಬೆರಳೆಣಿಕೆಯಷ್ಟು ಬಾರಿ ಮಾತ್ರ ಮರು ಡಾಂಬರೀಕರಣ ಮತ್ತು ದುರಸ್ತಿ ಕಾರ್ಯ ಮಾಡಲಾಗಿತ್ತು. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ವಾಹನ ಸಂಚಾರಕ್ಕೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಹಾಳಾಗಿತ್ತು.
ಮರು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ವಾಹನ ಸಂಚಾರ ತಡೆದೂ ಪ್ರತಿಭಟನೆ ನಡೆಸಿದ್ದರು. ನಾಲ್ಕೈದು ತಿಂಗಳು ಕಳೆದರೂ ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಈ ಪ್ರದೇಶದ ಕೆಲವು ಕ್ರಿಯಾಶೀಲ ಗ್ರಾಮಸ್ಥರು ಸಂಘಟಿತರಾದರು. ತಾವೇ ರಸ್ತೆಯ ದುರಸ್ತಿ ಕಾರ್ಯಕ್ಕೆ ಮುಂದಾದರು. ಸಾರ್ವಜನಿಕರಿಂದ ದೇಣಿಗೆ ಮೂಲಕ ಸುಮಾರು ₹ 1.25 ಲಕ್ಷ ಸಂಗ್ರಹಿಸಿ ಕಾಮಗಾರಿ ಕೈಗೊಂಡರು. ಈ ಕಾರ್ಯದಲ್ಲಿ ಸ್ಥಳೀಯ ಸೇವಾ ಸಹಕಾರ ಸಂಘ, ಆನಗೋಡ ಗ್ರಾಮ ಪಂಚಾಯ್ತಿ ಮತ್ತು ದಾನಿಗಳೂ ಕೈಜೋಡಿಸಿದರು.
ಈ ರಸ್ತೆಯಲ್ಲಿ ಸಾತೊಡ್ಡಿ ಜಲಪಾತಕ್ಕೆ ಸಾಗುವ ಸಾವಿರಾರು ಪ್ರವಾಸಿಗರಿಗೆ ಕೂಡಾ ರಸ್ತೆಯಿಂದ ತೊಂದರೆ ಯಾಗುತ್ತಿತ್ತು. ಇದನ್ನು ಮನಗಂಡ ಗ್ರಾಮಸ್ಥರು ಸಭೆ ನಡೆಸಿ ನಂತರ ಕೈಗೊಂಡ ನಿರ್ಣಯವನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದರು. ಈಗ ಈ ರಸ್ತೆ ವಾಹನ ಸಂಚಾರಕ್ಕೆ ಸೂಕ್ತವಾಗಿದೆ.