ಕಾರವಾರ:ಅಂಬೇಡ್ಕರ್ ಜಯಂತಿಯ ನಿಮಿತ್ತ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ನೆರೆದ ಬಿಜೆಪಿ ಕಾರ್ಯಕರ್ತರು, ಜೈ ಭೀಮ್ ಕಮಲ ಯಾತ್ರೆಗಾಗಿ ಶೃಂಗರಿಸಿದ ಕಾರಿನ ಮೇಲೆ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಇಟ್ಟು, ಅದಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.
ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಹಾಗೂ ನಗರಾಧ್ಯಕ್ಷ ಮನೋಜ್ ಭಟ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ರೂಪಾಲಿ ನಾಯ್ಕ, ಅಂಬೇಡ್ಕರ್ ಜೀವನ ಹಾಗೂ ಸಾಧನೆಗಳ ಬಗ್ಗೆ ಹಾಗೂ ಅವರ ವ್ಯಕ್ತಿ ಪರಿಚಯದ ಕುರಿತು ವಿವರಿಸಿದರು.
ಈ ವೇಳೆ ಬಿಜೆಪಿ ಎಸ್.ಟಿ.,ಎಸ್.ಸಿ ಮೋರ್ಚಾದ ಅಧ್ಯಕ್ಷ ಉದಯ ಬಶೆಟ್ಟಿ ಮಾತನಾಡಿ, ಕಾರವಾರ ಅಂಕೋಲಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ, ಪಂಗಡಗಳ ಕೇರಿಯಲ್ಲಿ ವಾಸಿಸುವ ಕುಟುಂಬಗಳನ್ನು ಸಂಪರ್ಕಿಸಿ, ಅವರ ಸಮಸ್ಯೆಗಳನ್ನು ಪಟ್ಟಿ ಮಾಡುವ ಉದ್ದೇಶಕ್ಕಾಗಿ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಬಳಿಕ ಇಲ್ಲಿ ಸಂಗ್ರಹಿಸಿದ ಸಮಸ್ಯೆಗಳನ್ನು ಪಟ್ಟಿ ಮಾಡಿ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಕಳುಹಿಸಲಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಪಟ್ಟಿಯ ಅನ್ವಯ ಎಸ್.ಸಿ., ಎಸ್.ಟಿಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಪ್ರಮುಖರಾದ ನಾಗರಾಜ ನಾಯಕ, ಕಿಶನ್ ಕಾಂಬ್ಳೆ ಸೇರಿದಂತೆ ಅನೇಕರು ಇದ್ದರು.