ಮೈಸೂರು: ‘ಉಡುಪಿಯಲ್ಲಿ 8 ಮಠಗಳಿವೆ. ಅಲ್ಲಿರುವ ಸ್ವಾಮಿಗಳನ್ನು ಕೇಳುವೆ. ಶಾಲೆ ಕಟ್ಟಿಸಿದ್ದೀರಾ? ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೊಳೆಗಳಿಗೆ ಸೇತುವೆ ನಿರ್ಮಿಸಿದ್ದೀರಾ? ಸಮಾಜ ನಿಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ, ಸಮಾಜದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು?’
–ಹೀಗೆ ಪ್ರಶ್ನಿಸಿದವರು ಲೇಖಕ, ನವದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ.
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಶನಿವಾರ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರ ಏರ್ಪಡಿಸಿದ್ದ ‘ರಾಷ್ಟ್ರ ನಿರ್ಮಾಣ– ಅಂಬೇಡ್ಕರ್ ಪ್ರಸ್ತುತತೆ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಧರ್ಮಾಧಿಕಾರಿಯನ್ನು ಯಾರು ಪ್ರಶ್ನಿಸುತ್ತಾರೋ ಅವರಿಗೆ ಸಮಾಜ ಋಣಿಯಾಗಿರುತ್ತದೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಇದಕ್ಕಾಗಿ ಸಮಾಜದಿಂದ ಎಲ್ಲವನ್ನೂ ಪಡೆದ ಉಡುಪಿಯ ಸ್ವಾಮೀಜಿಗಳು ಆಶೀರ್ವಾದ ಮಾತ್ರ ಮಾಡುತ್ತಾರೆಯೇ ಹೊರತು ಬೇರೇನು ಕೊಟ್ಟಿದ್ದಾರೆ’ ಎಂದು ಪ್ರಶ್ನಿಸಿದರು.
‘ಬ್ರಿಟಿಷರು ಈ ದೇಶಕ್ಕೆ ಬರದೆ ಇದ್ದರೆ ಬ್ರಾಹ್ಮಣರ ಮನೆಯಲ್ಲಿ ಸೆಗಣಿ ಎತ್ತುತ್ತಿದ್ದೆ ಎಂದು ಕುವೆಂಪು ಹೇಳಿದ ಹಾಗೆ, ಕ್ರೈಸ್ತ ಮಿಷನರಿಗಳು ಮಂಗಳೂರಲ್ಲಿದ್ದ ಪರಿಣಾಮ ನಾನು ಓದಲು ಸಾಧ್ಯವಾಯಿತು. ಅದೇ ಉಡುಪಿಯಲ್ಲಿದ್ದರೆ ವಿದ್ಯಾವಂತನಾಗುತ್ತಿರಲಿಲ್ಲ’ ಎಂದು ಹೇಳಿದರು.
‘ಫಕೀರ ಮಹಮ್ಮದ್ ಕಟ್ಪಾಡಿ ಅವರ ಕುದುರೆಮೋತಿ ಎಂಬ ಬೀದಿನಾಟಕದಲ್ಲಿ ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಪಾತ್ರ ಮಾಡಿದ್ದೆ. ನಾವೆಲ್ಲ ಸಮಾನವಾಗಿರಬೇಕು. ಆದರೆ… ಎನ್ನುವ ಅವರ ಜನಪ್ರಿಯ ಮಾತನ್ನು ಆಡುತ್ತಿದ್ದೆ. ಆಗ ಅಷ್ಟೊಂದು ಸ್ವಾತಂತ್ರ್ಯವಿತ್ತು. ಈಗ ಅದೇ ಪಾತ್ರ ಮಾಡಿದರೆ ನನ್ನ ಹೆಣ ಬೀಳುತ್ತದೆ’ ಎಂದರು.
‘ಯಕ್ಷಗಾನದಲ್ಲಿ ಈಗ ಹಾಸ್ಯ ಕಲಾವಿದರಿಗೆ ಕೆಲಸವೇ ಇಲ್ಲ. ಕೆಲವೇ ವರ್ಷಗಳ ಹಿಂದೆ ಯಕ್ಷಗಾನ ಹಾಸ್ಯ ಪಾತ್ರಧಾರಿಗಳು ತಮಾಷೆ ಮಾಡಿದರೆ ಯಾರೂ ತಪ್ಪು ತಿಳಿದುಕೊಳ್ಳುತ್ತಿರಲಿಲ್ಲ. ಈಗ ಹಾಸ್ಯ ಮಾಡಿದರೆ ಆಯಾ ಜಾತಿಯವರು ಜಗಳಕ್ಕೇ ಬರುತ್ತಾರೆ’ ಎಂದು ಹೇಳಿದರು.
ಭಗವದ್ಗೀತೆ ಮೂಲಕ ಆಳಬೇಡಿ
ಭಗವದ್ಗೀತೆ ಹಿಡಿದುಕೊಂಡು ನಮ್ಮನ್ನು ಆಳುವುದು ಯಾಕೆ? ಈ ವಿಚಾರದಲ್ಲಿ ಉಡುಪಿ ಅಷ್ಟಮಠಗಳನ್ನು ಪ್ರಶ್ನಿಸಬೇಕಿದೆ ಎಂದು ಪುರುಷೋತ್ತಮ ಬಿಳಿಮಲೆ ಕೇಳಿದರು.
ಯಾರನ್ನು ಕೇಳಿ ಧರ್ಮಶಾಸ್ತ್ರ ರಚಿಸಿದ್ದೀರಿ ಎಂದು ಪ್ರಶ್ನಿಸಿದ ಅವರು, ‘ಧರ್ಮಶಾಸ್ತ್ರಗಳನ್ನೇ ರಾಷ್ಟ್ರೀಯ ಗ್ರಂಥಗಳನ್ನಾಗಿ ಮಾಡಿ, ನಮ್ಮ ಮೇಲೆ ಹೇರಲಾಗುತ್ತಿದೆ. ಆಧುನಿಕ ಭಾರತದ ಧರ್ಮಗ್ರಂಥವೆಂದರೆ ಸಂವಿಧಾನ’ ಎಂದರು.
ಪೌರೋಹಿತ್ಯ ಹಾಗೂ ಆನುವಂಶಿಕ ಪೌರೋಹಿತ್ಯವನ್ನು ನಿಷೇಧಿಸಬೇಕು. ಎಲ್ಲ ಧರ್ಮಾಧಿಕಾರಿಗಳು ಸರ್ಕಾರದ ಅಧೀನಕ್ಕೆ ಒಳಪಡಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಅದನ್ನು ಈಗಲಾದರೂ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.