ಬೆಂಗಳೂರು: ಮೊಳಕಾಲ್ಮುರು ಕ್ಷೇತ್ರದ ಬಿಜೆಪಿ ಟಿಕೆಟ್ ಸಂಘರ್ಷಕ್ಕೆ ತೇಪೆ ಹಾಕಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಡೆಸಿದ ಸಂಧಾನ ಯತ್ನ ವಿಫಲವಾಗಿದೆ.
ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರದಲ್ಲಿ ಟಿಕೆಟ್ ನೀಡಿರುವುದರಿಂದಾಗಿ ಹಾಲಿ ಶಾಸಕ ಎಸ್. ತಿಪ್ಪೇಸ್ವಾಮಿ ಮತ್ತು ಅವರ ಬೆಂಬಲಿಗರು ಬೀದಿ ಕಾಳಗ ನಡೆಸಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ವಲಸಿಗರಿಗೆ ಟಿಕೆಟ್ ಕೊಟ್ಟಿರುವುದು ಆಕಾಂಕ್ಷಿಗಳನ್ನು ಕೆರಳಿಸಿದೆ. ಆದರೆ, ಅದು ತೀವ್ರ ಮಟ್ಟದ ಅಸಹನೆಗೆ ಕಾರಣವಾಗಿಲ್ಲ.
ಶ್ರೀರಾಮುಲು ಮತ್ತು ತಿಪ್ಪೇಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಸಿ, ಇಬ್ಬರ ಮಧ್ಯೆ ಸಂಧಾನ ನಡೆಸುವ ಪ್ರಯತ್ನವನ್ನು ಯಡಿಯೂರಪ್ಪ ಶನಿವಾರ ಮಾಡಿದರು. ಆಕ್ರೋಶದಿಂದ ಕುದಿಯುತ್ತಿರುವ ತಿಪ್ಪೇಸ್ವಾಮಿ ಬೆಂಗಳೂರಿಗೆ ಬರಲಿಲ್ಲ. ದೂರವಾಣಿಯಲ್ಲಿ ಯಡಿಯೂರಪ್ಪ ಜತೆ ಮಾತನಾಡಿದ ಶ್ರೀರಾಮುಲು, ‘ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ’ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಿ, ಮೊಳಕಾಲ್ಮುರಿನಲ್ಲಿ ತಿಪ್ಪೇಸ್ವಾಮಿಗೆ ಟಿಕೆಟ್ ಕೊಡಿಸಿ ಸಿಟ್ಟು ಶಮನಗೊಳಿಸುವ ಚಿಂತನೆ ಪಕ್ಷದಲ್ಲಿದೆ ಎಂದೂ ಹೇಳಲಾಗಿದೆ.
ಬಿಜೆಪಿ ಎರಡನೇ ಪಟ್ಟಿ ಇಂದು
ಬಿಜೆಪಿ ಕಣಕ್ಕೆ ಇಳಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿ ಭಾನುವಾರ (ಏ.15) ರಾತ್ರಿ ಬಿಡುಗಡೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
224 ಕ್ಷೇತ್ರಗಳ ಪೈಕಿ 72 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ(ಸಿಇಸಿ) ಸಭೆ ನಡೆಯಲಿದೆ.
20 ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಗೊಂದಲ ಇದೆ. ಈ ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿಇಸಿ ಸಭೆಯಲ್ಲಿ ಆಖೈರುಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.