ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ದಿನಾಂಕ 15-04-2018 ರವಿವಾರ (ಚೈತ್ರ ಅಮಾವಾಸ್ಯೆ ) ರೂಢಿಗತ ಪರಂಪರೆಯಂತೆ ಕ್ಷತ್ರಿಯ ಕೋಮಾರಪಂಥ ಸಮಾಜದ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅಮೃತಾನ್ನ ಪ್ರಸಾದ ಭೋಜನ ವಿತರಣೆ ಜರುಗಿತು .
ಮಧ್ಯಾಹ್ನ 12.00 ಘಂಟೆಯಿಂದ ಶ್ರೀ ಮಹಾಬಲೇಶ್ವರ ದೇವಾಲಯದ ಎದುರಿನ ಮಹರ್ಷಿ ದೈವರಾತ ವೇದಿಕೆಯಲ್ಲಿ ‘ಧರ್ಮಸಭೆ’ ನಡೆಯಿತು .
ಧರ್ಮಸಭೆಯಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು . ಕೋಮಾರಪಂಥ ಸಮಾಜದ ವತಿಯಿಂದ ಫಲ ಸಮರ್ಪಣೆ ನಡೆಯಿತು .
ಶ್ರೀ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಶ್ರೀಮಠದ ಧರ್ಮಚಕ್ರ ಟ್ರಸ್ಟ್ – ಶ್ರೀರಾಮಚಂದ್ರಾಪುರಮಠ ಇವರ ವತಿಯಿಂದ ಗೋಕರ್ಣ, ತೊರ್ಕೆ , ಹನೇಹಳ್ಳಿ, ನಾಡುಮಾಸ್ಕೇರಿ , ಅಗ್ರಗೋಣ, ಸಗಡಗೇರಿ, ಹಿರೇಗುತ್ತಿ, ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ ಸಮುದಾಯದ ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ಕಳೆದ ನಾಲ್ಕು ವರ್ಷಗಳಿಂದ ‘ಸಾರ್ವಭೌಮ ವಿದ್ಯಾರ್ಥಿ ವೇತನ’ ವಿತರಿಸಲಾಗುತ್ತಿದೆ. ಮಹರ್ಷಿ ದೈವರಾತ ವೇದಿಕೆಯಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರ ಅಮೃತ ಹಸ್ತಗಳಿಂದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಜರುಗಿತು . ವಿದ್ಯಾನಿಧಿ ಸಮಿತಿಯ ಪರವಾಗಿ ಸಂಚಾಲಕ ಶ್ರೀ ಮುರಳೀಧರ ಪ್ರಭು ಪ್ರಾಸ್ತಾವಿಕ ಮಾತನ್ನಾಡಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಸ್ವಾಗತಿಸಿದರು .
ಕೋಮಾರಪಂಥ ಸಮಾಜದ ಅಧ್ಯಕ್ಷರಾದ ಶ್ರೀ ಆರ್ ಎಚ್ ನಾಯ್ಕ ಸಮಾಜದ ವತಿಯಿಂದ ಮಾತನಾಡಿದರು . ಶ್ರೀ ಬೀರಣ್ಣ ನಾಯಕ ಅಡಿಗೋಣ ಪ್ರತಿಜ್ಞಾ ವಿಧಿ ಬೋಧಿಸಿದರು . ಶ್ರೀ ರಾಜೀವ ಗಾಂವಕರ್ , ಶ್ರೀ ಪ್ರಮೋದ ಪಂಡಿತ ಉಪಸ್ಥಿತರಿದ್ದರು . ಶ್ರೀ ರವಿ ಭಟ್ ಸೂರಿ ನಿರೂಪಣೆ ನೆರವೇರಿಸಿದರು .