ಸಿದ್ದಾಪುರ: ಯಕ್ಷಗಾನ ಇದು ಕರಾವಳಿ ಕಲೆ ಎಂದು ಗುರಿತಿಸಲ್ಪಟ್ಟಿದೆ. ಇದು ಮಲೆನಾಡಿನ ಕಲೆ. ಗ್ರಾಮೀಣ ಜನತೆ ಯಕ್ಷಗಾನವನ್ನು ಉಳಿಸಿ ಬೆಳೆಸಿದ್ದರಿಂದ ಇಂದು ಇಷ್ಟು ಎತ್ತರಕ್ಕೆ ಬೆಳೆದುನಿಂತಿದೆ. ಯಕ್ಷಗಾನ ಸೇವೆಯನ್ನು ಪಡೆದುಕೊಳ್ಳುವ ಹಾಗೂ ಸೇವೆಯನ್ನು ನೀಡುವ ಕಲೆಯಾಗಿರುವುದರಿಂದ ಇದನ್ನು ಎಲ್ಲರೂ ಕಲಿಯಬಹುದಾಗಿದೆ. ವಿಶೇಷವಾಗಿ ಮಕ್ಕಳಿಗೆ ಯಕ್ಷಗಾನದ ಕುರಿತು ಆಸಕ್ತಿಮೂಡಿಸುವದಕ್ಕೆ ಸಮಾಜ ಮುಂದಾಗಬೇಕು. ಎಂದು ಖ್ಯಾತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಸಹಿಪ್ರಾ ಶಾಲೆಯಲ್ಲಿ ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ ಹೊಸ್ತೋಟ ಮಂಜುನಾಥ ಭಾಗವತರ ಮಾರ್ಗದರ್ಶನದಲ್ಲಿ ಹದಿನೈದು ದಿನ ಆಯೋಜಿಸಿರುವ 16ನೇ ವರ್ಷದ ಮಕ್ಕಳ ಯಕ್ಷಗಾನ ತರಬೇತಿ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ನಾಡಿನ ಕಲೆಯಾಗಿರುವ ಯಕ್ಷಗಾನ ಇಂದು ವಿಶ್ವವ್ಯಾಪಿ ಪ್ರಸಿದ್ದಿಗೊಳ್ಳುತ್ತಿರುವುದರಿಂದ ಅದರ ಅಧ್ಯಯನ ಹಾಗೂ ಕಲಿಕೆ ಮಕ್ಕಳಿಗೆ ನೀಡುವ ಅವಶ್ಯಕತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಯಕ್ಷಗಾನ ಶಿಬಿರ ನಡೆಸುವುದು ಕಷ್ಟಕರವಾಗಿದ್ದು ಅದರಲ್ಲಿಯೂ ದಿವಾನ್ ಯಕ್ಷಸಮೂಹ ಹದಿನೈದು ವರ್ಷ ಯಶಸ್ವಿಯಾಗಿ ನಡೆಸಿರುವುದು ಶ್ಲಾಘನೀಯ ಎಂದು ಹೇಳಿದರು.
ಕೊಂಕಣಿ ಸಾಹಿತಿ ವಿಶ್ವನಾಥ ಶೇಟ್ ಹಾರ್ಸಿಕಟ್ಟಾ ಮಾತನಾಡಿ ಯಕ್ಷಗಾನ ಸರ್ವಾಂಗ ಸುಂದರ ಕಲೆ. ಜಾಗತಿಕ ಮಟ್ಟದಲ್ಲಿ ಸರ್ವಾಂಗ ಸುಂದರ ಕಲೆ ಇದ್ದರೆ ಅದು ಯಕ್ಷಗಾನ ಮಾತ್ರ ಎಂದು ಹೇಳಿದರು.
ದಿವಾನ್ ಯಕ್ಷಸಮೂಹದ ಅಧ್ಯಕ್ಷ ಪಿ.ವಿ.ಹೆಗಡೆ ಹೊಸಗದ್ದೆ ಅಧ್ಯಕ್ಷತೆವಹಿಸಿದ್ದರು. ವರ್ತಕ ಅನಂತ ಶಾನಭಾಗ, ಶಿಬಿರದ ನಿರ್ದೇಶಕ ನರೇಂದ್ರ ಹೆಗಡೆ ಅತ್ತೀಮುರಡು, ಎಂ.ಆರ್.ಹೆಗಡೆ ದಂಟಕಲ್ಲ, ಆರ್.ವಿ.ಹೆಗಡೆ ಹೊನ್ನೆಹದ್ದ, ಮಧುಕೇಶ್ವರ ಹೆಗಡೆ ಕಲ್ಮನೆ,ಶ್ರೀಕಾಂತ ಹೆಗಡೆ ಪೆಟೇಸರ, ಗೋಪಾಲ ಹೆಗಡೆ ವಾಜಗದ್ದೆ, ಗೋಪಾಲ ಹೆಗಡೆ ಹಾರ್ಸಿಮನೆ ಉಪಸ್ಥಿತರಿದ್ದರು.