ಕುಮಟಾ: ಕಳೆದ ಎರಡು ವರ್ಷಗಳ ಹಿಂದೆ ಕುಮಟಾ ಪಟ್ಟಣದಲ್ಲಿ ಅನಿರೀಕ್ಷಿತವಾಗಿ ಉಂಟಾಗಿದ್ದ ಕುಡಿಯುವ ನೀರಿನ ತೀವ್ರ ಬರಗಾಲ ಸ್ಥಳೀಯ ಪುರಸಭೆ ಸಾಕಷ್ಟು ಮುಂಚಿತವಾಗಿ ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ತಾಲ್ಲೂಕಿನ ಮರಾಕಲ್ ಬಳಿ ಅಘನಾಶಿನಿ ನದಿ ನಿರ್ಮಿಸಿರುವ ಕುಡಿಯುವ ನೀರಿನ ಯೋಜನೆಯಿಂದ ಕುಮಟಾ–ಹೊನ್ನಾವರ ಅವಳಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಎಷ್ಟೇ ಬೇಸಿಗೆ ಎದುರಾದರೂ ಕುಡಿಯುವ ನೀರು ಪೂರೈಕೆಗೆ ಕೊರತೆಯಾಗುವಂತೆ ಅಘನಾಶಿನಿ ನದಿಯಲ್ಲಿ ನೀರಿನ ಪ್ರಮಾಣ ಹಿಂದೆಂದೂ ಕಡಿಮೆಯಾಗಿರಲಿಲ್ಲ. ಎರಡು ವರ್ಷಗಳ ಅನುಭವದ ನಂತರ ಸ್ಥಳೀಯ ಪುರಸಭೆ ತಕ್ಷಣವೇ ಮರಾಕಲ್ ಬಳಿ ಅಘನಾಶಿನಿ ನದಿಗೆ ಅಡ್ಡಲಾಗಿ ಸುಮಾರು 130 ಮೀಟರ್ ಉದ್ದ ಹಾಗೂ ತಲಾ ನಾಲ್ಕು ಅಡಿ ಎತ್ತರ, ಅಗಲದ ಸಿಮೆಂಟ್ ಒಡ್ಡು ಕಟ್ಟಲಾಗಿದೆ. ಅದರ ಮೇಲೆ ನೀರು ತುಂಬಿ ಹರಿಯಲಾರಂಭಿಸಿದ ಮೇಲೆ ಉಸುಕಿನ ಚೀಲಗಳನ್ನು ಹಾಕಿ ಒಡ್ಡನ್ನು ತಾತ್ಕಾಲಿಕವಾಗಿ ಎತ್ತರಿಸಿದ ನಂತರ ನೀರಿನ ಸಮಸ್ಯೆ ನೀಗಿತ್ತು.
‘ಸದ್ಯ ಏಪ್ರಿಲ್ ತಿಂಗಳವರೆಗೂ ನೀರಿನ ಅಭಾವ ಆಗಲಾರದು ಎನ್ನುವ ವಿಶ್ವಾಸವಿದೆ. ಅಷ್ಟರೊಳಗೆ ₹ 15 ಲಕ್ಷ ವೆಚ್ಚದಲ್ಲಿ ಮರಾಕಲ್ ಬಳಿ ಅಘನಾಶಿನಿ ನದಿಗೆ ನಿರ್ಮಿಸಿದ ಒಡ್ಡಿನ ಎತ್ತರವನ್ನು ಇನ್ನೂ ನಾಲ್ಕು ಅಡಿ ಎತ್ತರಿಸುವ ಕಾಮಗಾರಿ ಒಂದು ವಾರದಲ್ಲಿ ಆರಂಭವಾಗಲಿದೆ. ಹೀಗೆ ಮಾಡಿದರೆ ಮಳೆ ಬೀಳುವರೆಗೂ ಕುಡಿಯುವ ನೀರಿನ ಅಭಾವ ಆಗಲಾರದು’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಸುರೇಶ ತಿಳಿಸುತ್ತಾರೆ.
ಪುರಸಭೆಯ ಅಧ್ಯಕ್ಷ ಮಧುಸೂಧನ್ ಶೇಟ್ ಈ ಬಾರಿ ಮುನ್ನೆಚ್ಚರಿಕೆ ವಹಿಸಲಾಗಿದ್ದು ನೀರಿನ ಅಭಾವ ಅಷ್ಟಾಗಿ ಕಾಡಲಾರದು, 45 ನಿಮಿಷಗಳಷ್ಟು ನೀರು ನೀಡಬಹುದಾದ ಸಾಮರ್ಥ್ಯ ಈ ವರೆಗೂ ಇದೆ ಎಂದರು.
ಪುರಸಭೆ ಎಂಜಿನಿಯರ್ ಪ್ರಶಾಂತ ವೆರ್ಣೇಕರ್, ‘ಮೇ ತಿಂಗಳಲ್ಲಿ ಮರಾಕಲ್ ಬಳಿ ಅಘನಾಶಿನಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ನದಿಯಂಚಿನ ರೈತರು ಪಂಪ್ ಸೆಟ್ ಬಳಸಿ ಕೃಷಿಗೆ ನೀರು ಬಳಕೆ ಮಾಡದಂತೆ ತಡೆಯುವ ಪ್ರಕ್ರಿಯೆ ಆರಂಭಿಸುವುದು ಅನಿವಾರ್ಯವಾಗುತ್ತದೆ’ ಎಂದು ಹೇಳಿದರು.