ಸಿಎಂ ಯೋಗಿ ಆದಿತ್ಯನಾಥ್‌ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿರುವ ಉತ್ತರಪ್ರದೇಶ ಸರ್ಕಾರ, ಇದೀಗ ಗೋಮೂತ್ರದಿಂದಲೇ ಔಷಧಗಳ ತಯಾರಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ರಾಜ್ಯ ಸರ್ಕಾರದ ಆಯುರ್ವೇದ ಇಲಾಖೆಯು, ಗೋಮೂತ್ರದಿಂದ 8 ಔಷಧಗಳನ್ನು ಅಭಿವೃದ್ಧಿಪಡಿಸಿದೆ.

ಯಕೃತ್ತು ಸಮಸ್ಯೆ, ಕೀಲು ನೋವು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಸಹಾಯಕವಾಗುವಂಥ ಔಷಧಗಳಿವು ಎಂದು ಇಲಾಖೆಯ ನಿರ್ದೇಶಕ ಡಾ. ಆರ್‌.ಆರ್‌.ಚೌಧರಿ ಹೇಳಿದ್ದಾರೆ. ಆಯುರ್ವೇದ ಇಲಾಖೆಯು ಲಕ್ನೋ ಮತ್ತು ಪಿಲಿಭಿತ್‌ನಲ್ಲಿ ಎರಡು ಫಾರ್ಮಸಿಗಳು ಹಾಗೂ ಕೆಲವು ಖಾಸಗಿ ಘಟಕಗಳನ್ನು ಹೊಂದಿದ್ದು, ಗೋಮೂತ್ರ, ಗೋವಿನ ಹಾಲು ಹಾಗೂ ತುಪ್ಪದಿಂದ ವಿವಿಧ ರೀತಿಯ ಔಷಧಗಳ ತಯಾರಿಕೆಯಲ್ಲಿ ತೊಡಗಿಕೊಂಡಿವೆ.

ಗೋಮೂತ್ರ ಎನ್ನುವುದು ಆಯುರ್ವೇದದ ಅವಿಭಾಜ್ಯ ಅಂಗವಾಗಿದೆ. ಹೊಸ ಸಂಶೋಧನೆಗಳು ಕೂಡ ಗೋಮೂತ್ರದ ಪ್ರಯೋಜನಗಳನ್ನು ಒಪ್ಪಿಕೊಂಡಿವೆ. ನಾವೀಗ 8 ಔಷಧಗಳನ್ನು ತಯಾರಿಸಿದ್ದೇವೆ. ಈ ಔಷಧಗಳ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿ, ಬೇರೆ ಬೇರೆ ರೋಗಗಳ ಶಮನಕ್ಕೆ ಅನುಕೂಲವಾಗುವಂತೆ ಮಾಡುವುದು ನಮ್ಮ ಉದ್ದೇಶ ಎಂದೂ ಹೇಳಿದ್ದಾರೆ ಚೌಧರಿ.

RELATED ARTICLES  ನಿಮ್ಮ ಉತ್ತಮ ಆರೋಗ್ಯಕ್ಕೆ ಈ ಅಕ್ಕಿ ಬಳಸಿ.

ಸ್ನಾತಕೋತ್ತರ ಪದವಿ ಆರಂಭಕ್ಕೆ ಸಿದ್ಧತೆ: ರಾಜ್ಯದ ವಿವಿಧೆಡೆ 8 ಆಯುರ್ವೇದಿಕ್‌ ವೈದ್ಯಕೀಯ ಕಾಲೇಜುಗಳಿದ್ದು, ಇಲ್ಲಿ ಆಯುರ್ವೇದಿಕ್‌ ಔಷಧಗಳ ಕುರಿತು ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಇದರ ಜತೆಗೆ, ಈ ಕಾಲೇಜುಗಳಿಗೆ ಪ್ರತಿದಿನ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆಯುರ್ವೇದ ಇಲಾಖೆಯು ರಾಜ್ಯಾದ್ಯಂತ ಹೊಸ ಫಾರ್ಮಸಿಗಳನ್ನು ಹಾಗೂ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜುಗಳಲ್ಲಿ ಸ್ನಾತಕೋತ್ತರ ಮತ್ತು ಎಂಡಿ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಿದೆ ಎಂದೂ ಚೌಧರಿ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಯೋಗಿ ಸರ್ಕಾರವು, ನೆಲವನ್ನು ಸ್ವತ್ಛಗೊಳಿಸುವಂತ ದ್ರಾವಣಕ್ಕೆ ಗೋಮೂತ್ರವನ್ನು ಬಳಸುವಂತೆ ಸಲಹೆ ನೀಡಿತ್ತು. 2017ರ ಜುಲೈನಲ್ಲಿ ಕೇಂದ್ರ ಸರ್ಕಾರವು ಆರೆಸ್ಸೆಸ್‌, ವಿಎಚ್‌ಪಿ ಸಂಘಟನೆಯ ಮೂವರು ಸೇರಿದಂತೆ 19 ಮಂದಿ ಸದಸ್ಯರುಳ್ಳ ಸಮಿತಿಯೊಂದನ್ನು ರಚಿಸಿತ್ತು. ಗೋಮೂತ್ರ ಸೇರಿದಂತೆ ಗೋವಿನ ವಿವಿಧ ಉತ್ಪನ್ನಗಳ ಬಗ್ಗೆ ಸಂಶೋಧನೆ ನಡೆಸುವಂತೆ ಈ ಸಮಿತಿಗೆ ಸೂಚಿಸಲಾಗಿತ್ತು. ಅದರಂತೆ, ಪಂಚಗವ್ಯಗಳ ಅನುಕೂಲತೆಗಳ ಬಗ್ಗೆ ಕೇಂದ್ರ ಸಚಿವ ಹರ್ಷವರ್ಧನ್‌ ನೇತೃತ್ವದ ಈ ಸಮಿತಿಯು ಅಧ್ಯಯನ ನಡೆಸುತ್ತಿದೆ.

RELATED ARTICLES  ನೀರು ತರಲು ಹೋದ ಮಹಿಳೆ ಬಾವಿಗೆ ಬಿದ್ದಳು..!

ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರವು ರಾಜ್ಯದ 7 ಜಿಲ್ಲೆಗಳು ಹಾಗೂ ನಗರಪ್ರದೇಶಗಳ 16 ಕಡೆಗಳಲ್ಲಿ ಒಂದು ಸಾವಿರ ಗೋವುಗಳನ್ನು ಸಾಕುವಂಥ ಸಾಮರ್ಥ್ಯದ ಗೋಶಾಲೆಗಳನ್ನು ನಿರ್ಮಿಸಲು ಅನುಮತಿ ನೀಡಿದೆ. ರಾಜ್ಯದ ಪ್ರತಿ ಬ್ಲಾಕ್‌ನಲ್ಲೂ ಇಂಥ ಗೋಶಾಲೆ ನಿರ್ಮಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಸುರಕ್ಷಿತ ಪ್ರದೇಶಗಳಲ್ಲಿ ಹಾಗೂ ಮೇವು ಮತ್ತು ನೀರಿನ ಲಭ್ಯತೆ ಸಾಕಷ್ಟು ಇರುವಂಥ ಪ್ರದೇಶಗಳಲ್ಲೇ ಇದನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವ ಕುರಿತೂ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.