ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿ ಶಿಕ್ಷಣ ಕೋರ್ಸ್‌ಗಳಿಗಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಇದೇ 18ರಿಂದ ಪ್ರಾರಂಭವಾಗಲಿದೆ.
18ರಂದು ಜೀವವಿಜ್ಞಾನ, ಗಣಿತ, 19ಕ್ಕೆ ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ ಪರೀಕ್ಷೆ ನಡೆಯಲಿದೆ. 20ಕ್ಕೆ ಹೊರರಾಜ್ಯದ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆ ಇರಲಿದೆ. ಇದೇ ಮೊದಲ ಬಾರಿಗೆ ಪ್ರಶ್ನೆಪತ್ರಿಕೆಗಳನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ.
ಆಯುಷ್, ನ್ಯಾಚುರೋಪತಿ, ಯೋಗ, ಯುನಾನಿ ಕೋರ್ಸ್‌ಗಳು ನೀಟ್ ಅಡಿಯಲ್ಲಿ ಬರಲಿವೆ. ಹಾಗಾಗಿ ಸಿಇಟಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ರಾಜ್ಯದಲ್ಲಿ ಒಟ್ಟು 430 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಂಗಳೂರಿನಲ್ಲಿ 86 ಕೇಂದ್ರಗಳನ್ನು ತೆರೆಯಲಾಗಿದೆ. 1,00,071 ವಿದ್ಯಾರ್ಥಿಗಳು ಮತ್ತು 98,568 ವಿದ್ಯಾರ್ಥಿನಿಯರು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.
ಏನೆಲ್ಲ ಕೊಂಡೊಯ್ಯಬೇಕು?: ವಿದ್ಯಾರ್ಥಿಗಳು ಸಿಇಟಿ ಪ್ರವೇಶಪತ್ರದ ಜೊತೆ ಮಾನ್ಯತೆ ಇರುವ ಯಾವುದಾದರೂ ಗುರುತಿನ ಚೀಟಿಯನ್ನು (ಕಾಲೇಜಿನ ಗುರುತಿನ ಚೀಟಿ/ ದ್ವಿತೀಯ ಪಿಯು ಪ್ರವೇಶ ಪತ್ರ/ ಬಸ್ ಪಾಸ್/ ಚಾಲನ ಪರವಾನಗಿ/ ಪಾಸ್‌ಪೋರ್ಟ್/ ಆಧಾರ್ ಕಾರ್ಡ್/ ಪ್ಯಾನ್‌ಕಾರ್ಡ್) ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ನೀಲಿ ಅಥವಾ ಕಪ್ಪು ಮಸಿಯ ಎರಡು ಪೆನ್‌ಗಳನ್ನು ಇಟ್ಟುಕೊಂಡಿರುವುದು ಸೂಕ್ತ.
ಉತ್ತರಿಸುವ ಮುನ್ನ ಇದನ್ನು ತಿಳಿದಿರಿ: ಪರೀಕ್ಷೆ ಬರೆಯುವ ಆತಂಕದಲ್ಲಿರುವ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ನಮೂದಿಸಬೇಕಾದ ಕೆಲ ಮಾಹಿತಿಗಳನ್ನು ತಪ್ಪಾಗಿ ಬರೆಯುವುದನ್ನು ತಪ್ಪಿಸಲು ಈ ಬಾರಿ ವಿದ್ಯಾರ್ಥಿಗಳ ಹೆಸರು, ಕ್ರಮಸಂಖ್ಯೆ, ಪ್ರಶ್ನೆ ಪತ್ರಿಕೆ ಸಂಖ್ಯೆ ಎಲ್ಲವೂ ನಮೂದಾಗಿರುವ
(ಪ್ರಿ–ಪ್ರಿಂಟೆಡ್) ಒಎಂಆರ್ ಪತ್ರಿಕೆಯನ್ನು ನೀಡಲಾಗುತ್ತದೆ.
ವಿದ್ಯಾರ್ಥಿಗಳು ತಮಗೆ ನೀಡಿರುವ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಮಾಹಿತಿ ಹಾಗೂ ಪ್ರವೇಶ ಪತ್ರದ ಮಾಹಿತಿ ಒಂದೇ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅದೇ ರೀತಿ ಪ್ರಶ್ನೆಪತ್ರಿಕೆ ಮತ್ತು ಓಎಂಆರ್ ಉತ್ತರ ಪತ್ರಿಕೆಯ ಕೋಡ್ ಒಂದೇ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.
ಓಎಂಆರ್ ಉತ್ತರ ಪತ್ರಿಕೆಗಳಲ್ಲಿ ಶೇಡ್ ಮಾಡುವುದರ ಮೂಲಕ ಉತ್ತರಿಸಬೇಕು. ಸರಿ ಉತ್ತರಗಳನ್ನು ನೀಲಿ ಅಥವಾ ಕಪ್ಪು ಮಸಿಯ ಪೆನ್‌ಗಳಿಂದ ಗುರುತಿಸಬೇಕು.
ಹೆಚ್ಚಿನ ಭದ್ರತೆ: ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸಹಾಯಕ ಆಯುಕ್ತರ ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಖಜಾನೆಗಳ ಹೆಚ್ಚಿನ ಭದ್ರತೆ ಜವಾಬ್ದಾರಿ ವಹಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಒಟ್ಟು 430 ಪರೀಕ್ಷಾ ವೀಕ್ಷಕರು, 860 ವಿಶೇಷ ಜಾಗೃತಿ ದಳದ ಸದಸ್ಯರು, 430 ಪ್ರಶ್ನೆ ಪತ್ರಿಕೆ ಪಾಲಕರು, 12440 ಕೊಠಡಿ ಮೇಲ್ವಿಚಾರಕರ ಕಣ್ಗಾವಲಿನಲ್ಲಿ ಸಿಇಟಿ ನಡೆಯಲಿದೆ ಎಂದು ತಿಳಿಸಿದ್ದಾರೆ.
**
ಸಿಇಟಿ ಪರೀಕ್ಷಾ ವೇಳಾಪಟ್ಟಿ
ದಿನಾಂಕ; ದಿನ; ಸಮಯ; ವಿಷಯ; ಅಂಕಗಳು
18.04.2018; ಬುಧವಾರ; ಬೆಳಿಗ್ಗೆ 10.30 ರಿಂದ 11.50; ಜೀವವಿಜ್ಞಾನ; 60
ಮಧ್ಯಾಹ್ನ 2.30ರಿಂದ 3.50; ಗಣಿತ; 60
19.04.2018; ಗುರುವಾರ; ಬೆಳಿಗ್ಗೆ 10.30 ರಿಂದ 11.50; ಭೌತವಿಜ್ಞಾನ; 60
ಮಧ್ಯಾಹ್ನ 2.30ರಿಂದ 3.50; ರಸಾಯನ ವಿಜ್ಞಾನ; 60