ಕುಮಟಾ : ಕೇಂದ್ರ ಸಚಿವರು, ಉತ್ತರಕನ್ನಡದ ಸಂಸದರು ಆದ ಅನಂತಕುಮಾರ್ ಹೆಗಡೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲು ಉತ್ಸುಕರಾಗಿದ್ದಾರಂತೆ. ಈ ಬಗ್ಗೆ ಈಗ ವಿಷಯಗಳು ಚರ್ಚೆಯಾಗುತ್ತಿದೆ. ವಾಟ್ಸಪ್ ಹಾಗೂ ಫೇಸ್ ಬುಕ್‌ನಲ್ಲಿ ಕುತೂಹಲದಿಂದ ಜನರು ಈ ವಿಷಯ ಹಂಚುತ್ತಿದ್ದಾರೆ.
ಆದರೆ ಇದು ಕೇವಲ ವದಂತಿ ಎಂದು ಹೇಳುವಂತಿಲ್ಲ. ಈ ಬಗ್ಗೆ ಸ್ವತಃ ಅನಂತಕುಮಾರ್ ಹೆಗಡೆ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿದೆ ಎನ್ನಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಅನಂತಕುಮಾರ್ ಹೆಗಡೆ ನಿಲ್ಲಲಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಈಗಾಗಲೇ ಯಲ್ಲಾಪುರ ಸೇರಿದಂತೆ ಉತ್ತರಕನ್ನಡದ 6 ಕ್ಷೇತ್ರಗಳಲ್ಲಿ 5 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಕುಮಟಾ ಕ್ಷೇತ್ರವನ್ನ ಮಾತ್ರ ಉಳಿಸಿ ಕೊಂಡಿದೆ.
ಈಗ ಅನಂತಕುಮಾರ್ ಹೆಗಡೆ ರಾಜ್ಯ ರಾಜಕಾರಣಕ್ಕೆ ಕುಮಟಾ ಕ್ಷೇತ್ರದ ಅಭ್ಯರ್ಥಿಯಾಗಿ ಎಂಟ್ರಿ ಕೊಡುವ ಇಂಗಿತವನ್ನ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಇದಕ್ಕೆ ಬಿಜೆಪಿ ಹೈಕಮಾಂಡ್ ಅವಕಾಶ ಕೊಡುತ್ತಾ ಎನ್ನುವುದು ಮಾತ್ರ ತಿಳಿದಿಲ್ಲ. ಇದರ ಸತ್ಯಾ ಸತ್ಯತೆ ಇನ್ನೇನು ಖಚಿತವಾಗಬೇಕಾಗಿದೆ.
ಇತ್ತ ಕುಮಟಾದಿಂದ ಹಲವಾರು ಆಕಾಂಕ್ಷಿಗಳಾಗಿದ್ದು, ಈಗ ಅನಂತಕುಮಾರ್ ಹೆಗಡೆಯವರ ಈ ಸುದ್ದಿ ಮತಷ್ಟು ಕುತೂಹಲ ಮೂಡಿಸಿದೆ.
ಆದರೆ ಸಂಸದರಿಗೆ ಟಿಕೆಟ್ ಇಲ್ಲ ಎನ್ನು ಬಿಜೆಪಿ ನಿಯಮಕ್ಕೆ ಹೈಕಮಾಂಡ್ ಅನಂತಕುಮಾರ್ ಹೆಗಡೆಯವರ ಆಸೆಗೆ ಬ್ರೇಕ್ ಹಾಕಬಹುದು ಎಂದು ಬಿಜೆಪಿ ಉನ್ನತ ಮೂಲಗಳ ಮಾಹಿತಿ.
ಆದರೆ ಬಿಜೆಪಿ ಜಿಲ್ಲೆಯ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿ, ಕುಮಟಾ ಕ್ಷೇತ್ರವನ್ನ ಮಾತ್ರ ಉಳಿಸಿಕೊಂಡಿರುವುದು ಭಾರೀ ಕುತೂಹಲ ಮೂಡಿಸಿದೆ. ಈ ಬಗ್ಗೆ ನಿಖರ ಮಾಹಿತಿಗಾಗಿ ಕಾದು ಕುಳಿತಿದ್ದಾರೆ ಜನರು.