ಕಾರವಾರ: ‘ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗೋವಾದಿಂದ ನಮ್ಮ ರಾಜ್ಯಕ್ಕೆ ಮದ್ಯ ಸಾಗಣೆ ಆಗದಂತೆ ಸಹಕರಿಸಿ. ನೆಲ, ಜಲ ಮಾರ್ಗಗಳ ಮೂಲಕ ಅಕ್ರಮವಾಗಿ ಮದ್ಯ ಸಾಗಣೆ ನಡೆಯದ ರೀತಿಯಲ್ಲಿ ಕಟ್ಟೆಚ್ಚರ ವಹಿಸಿ’ ಎಂದು ರಾಜ್ಯ ಅಬಕಾರಿ ವಿಚಕ್ಷಣ ದಳದ ಜಂಟಿ ಆಯುಕ್ತ ಸೋಮಶೇಖರಪ್ಪ ಅವರು ಗೋವಾದ ಅಬಕಾರಿ ಅಧಿಕಾರಿಗಳಿಗೆ ಮನವಿ ಮಾಡಿದರು.

ಇಲ್ಲಿನ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಗುರುವಾರ ನಡೆದ ಉತ್ತರ ಕನ್ನಡ ಜಿಲ್ಲೆ ಮತ್ತು ಗೋವಾ ದಕ್ಷಿಣ ವಿಭಾಗದ ಅಬಕಾರಿ ಅಧಿಕಾರಿಗಳ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣೆ ಸಂದರ್ಭ ಆಗಿರುವ ಕಾರಣ ಗೋವಾ ಗಡಿಭಾಗದಲ್ಲಿ ಮೊದಲಿಗಿಂತಲೂ ಹೆಚ್ಚು ನಿಗಾ ವಹಿಸಲಾಗುತ್ತಿದೆ. ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಗೋವಾದಲ್ಲಿ ಮದ್ಯ ತಯಾರಿಕಾ ಘಟಕಗಳು ಅಗತ್ಯಕ್ಕಿಂತ ಹೆಚ್ಚು ಮದ್ಯ ಉತ್ಪಾದನೆ ಮಾಡದಂತೆ ಸೂಚಿಸಬೇಕು. ನಮ್ಮ ರಾಜ್ಯಕ್ಕೆ ಎರಡು ಲೀ ಮದ್ಯ ಸಾಗಣೆಗೆ ನೀಡಿರುವ ಅನುಮತಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಬೇಕು’ ಎಂದು ಒತ್ತಾಯಿಸಿದರು.

RELATED ARTICLES  ಡಿ. 2 ರಿಂದ ‘ಕುಮಟಾ ರೋಟರಿ ಉತ್ಸವ’

ದಕ್ಷಿಣ ಗೋವಾದ ಅಬಕಾರಿ ಸಹಾಯಕ ಆಯುಕ್ತ ಸತ್ಯವಾನ್, ಕಾಣಕೋಣ ವಲಯದ ಅಬಕಾರಿ ನಿರೀಕ್ಷಕ ಪ್ರಮೋದ್, ಸಾಂಗ್ವೆಲಿ ನಿರೀಕ್ಷಕ ಪ್ರಶಾಂತ್, ಸತಾರಾ ವಲಯದ ನಿರೀಕ್ಷಕ ವಿಭೂತಿ ಶೆಟ್ಟಿ ಭಾಗವಹಿಸಿದ್ದರು. ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ.ವೈ.ಮಂಜುನಾಥ್, ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಎಲ್.ಎ.ಮಂಜುನಾಥ್, ಎಲ್ಲ ವಲಯಗಳ ಉಪ ಅಧೀಕ್ಷಕರು, ನಿರೀಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಐದು ಕಿ.ಮೀ ವ್ಯಾಪ್ತಿಯಲ್ಲಿ ಬಾರ್‌ಗೆ ಬೀಗ!: ವಿಧಾನಸಭೆ ಚುನಾವಣೆ ಸಂದರ್ಭ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗುತ್ತದೆ. ಆ ದಿನ ರಾಜ್ಯಗಳ ಗಡಿಭಾಗದಿಂದ ಐದು ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲ ಬಾರ್, ವೈನ್‌ಶಾಪ್‌ಗಳನ್ನು ಮುಚ್ಚುವ ಬಗ್ಗೆ ರಾಜ್ಯದ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಗೋವಾ ಅಧಿಕಾರಿಗಳು ಈ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸುವ ಭರವಸೆ ನೀಡಿದ್ದಾರೆ.

RELATED ARTICLES  ಸಿದ್ದಾಪುರದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ : ನಾಲ್ವರು ಬಂಧನ

ಚುನಾವಣೆ ವೇಳೆ ಗೋವಾದಿಂದ ಮದ್ಯ ಅಕ್ರಮ ಸಾಗಣೆ ತಡೆಯಲು ಜಂಟಿ ಅರಣ್ಯ ಕೂಂಬಿಂಗ್ ಕಾರ್ಯಾಚರಣೆಗೆ ಉಭಯ ರಾಜ್ಯಗಳ ಅಧಿಕಾರಿಗಳು ಸಹಮತ ಸೂಚಿಸಿದರು. ಗೋವಾ ಗಡಿಯಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ತಲೆಹೊರೆಗಳ ಮೂಲಕ ಮದ್ಯ ಸಾಗಣೆ ಮಾಡಲಾಗುತ್ತಿದೆ. ಇದನ್ನು ತಡೆಯಲು ಎರಡೂ ರಾಜ್ಯಗಳ ಅಧಿಕಾರಿಗಳ ತಂಡಗಳು ಕಾರ್ಯ ಪ್ರವೃತ್ತವಾಗಬೇಕು. ಎರಡೂ ರಾಜ್ಯಗಳ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸುವ ಬಗ್ಗೆಯೂ ನಿರ್ಧರಿಸಲಾಯಿತು.